ಕಮಲಾಪುರ; 371(ಜೆ) ಉದ್ಯೋಗದಲ್ಲಿ ಬಳಕೆಗೆ ಯುವಕರ ನಿರಾಸಕ್ತಿ

PH 07
Published on

ಕಮಲಾಪುರ: ಹಲವರ ಹೋರಾಟದಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಮೀಸಲಾತಿ ದೊರೆತಿದ್ದು, ಇದರಿಂದ ಶೈಕ್ಷಣಿಕವಾಗಿ ಸಾಕಷ್ಟು ಲಾಭ ಸಿಗುತ್ತಿದೆ. ಆದರೆ ಯುವಕರು ಉದ್ಯೋಗಕ್ಕೆ ಮೀಸಲಾತಿ ಬಳಸಿಕೊಳ್ಳುವಲ್ಲಿ ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಬೇಸರ ವ್ಯಕ್ತಪಡಿಸಿದರು.

ಮಹಾಗಾಂವ್ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ನೇಮಕಾತಿ ಪ್ರಕ್ರಿಯೆಯಲ್ಲಿ ಮೂಲ ಮತ್ತು ಕಕ (ಹೈಕ) ವೃಂದ ಎಂಬ ಭಾಗಗಳಿರುತ್ತವೆ. ನಮ್ಮ ಭಾಗದ ಉದ್ಯೋಗಾಂಕ್ಷಿಗಳು ಕೇವಲ ಕಕ ವೃಂದ ನೇಮಕಾತಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಮೂಲ ವೃಂದದಲ್ಲೂ ಕಕ ಭಾಗಕ್ಕೆ ಮೀಸಲಾತಿ ಇರುತ್ತದೆ. ಹೀಗಾಗಿ ಸರಿಯಾಗಿ ತಿಳಿದುಕೊಂಡು, 371 (ಜೆ) ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

371 (ಜೆ) ಬಗ್ಗೆ ಅರಿವು ಮೂಡಿಸಲು ಶಾಲಾ ಮಟ್ಟದಲ್ಲಿ ಹೆಚ್ಚೆಚ್ಚು ಕಾರ್ಯಕ್ರಮ ನಡೆಸಬೇಕಿದೆ. ಯಾವ ರೀತಿಯಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಇಂತಹ ಕಾರ್ಯಾಗಾರಗಳು ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶಕ್ತಿ ಸಿಕ್ಕಂತಾಗುತ್ತದೆ ಎಂದರು.

ಶಾಸಕ ಬಸವರಾಜ ಮತ್ತಿಮಡು, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಪ್ರಾಂಶುಪಾಲ ಶರಣಪ್ಪ ಮಾಳಗೆ, ಪ್ರಮುಖರಾದ ಶಿವಕುಮಾರ ಪಸಾರ, ಪ್ರಕಾಶ ಹೊಸಮನಿ, ಮುರುಗೇಂದ್ರ ವೀರಶೆಟ್ಟಿ, ಮಲ್ಲಿಕಾರ್ಜುನ ಮರತೂರಕರ, ಸೋಮನಾಥ ತಡಕಲ್, ನರೇಶ ಹರಸೂರಕರ, ಡಾ.ಶಿಲ್ಪಾ ಗಾಂವ್ಕರ್, ಗಿರೀಶ ಪಾಟೀಲ್, ರೇಣುಕಾಬಾಯಿ ಜಿತ್ರಿ, ಸುಜಾತಾ ದೊಡ್ಡಮನಿ, ಭಾರ್ಗವಿ, ಡಾ. ವಿಠ್ಠಲರಾವ ಮುಕರಂಬಿ ಇತರರಿದ್ದರು. ಡಾ.ಜಗನ್ನಾಥ ಕುಕಡಿ ನಿರೂಪಣೆ ಮಾಡಿದರು. ಡಾ.ಬಸವರಾಜ ಕೊಂಬಿನ ಸ್ವಾಗತಿಸಿದರು. ಡಾ.ಶಿವಕುಮಾರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net