ಕಮಲ ಪಡೆಯಲ್ಲಿ ಸ್ಕಾೃಮ್‌ಗಳಿವೆ

PHOTO-1-002
Published on

ಚಿತ್ರದುರ್ಗ: ಜನರಿಗೆ 600ಕ್ಕೂ ಅಧಿಕ ಭರವಸೆ ನೀಡಿ, 50 ಪೂರೈಸಲಾಗದ ಬಿಜೆಪಿ ವಚನಭ್ರಷ್ಟ, ಜನವಿರೋಧಿ ಪಕ್ಷ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಿಡಿಕಾರಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಿಂಗಳೊಳಗೆ ಕೆಲ ಗ್ಯಾರಂಟಿ ಈಡೇರಿಸಿದ್ದೇವೆ. ಇದನ್ನು ಸಹಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ತಲೆಯಲ್ಲಿ ಮಿದುಳು ಇಲ್ಲವೆನ್ನುವ ಮೂಲಕ ಗ್ಯಾರಂಟಿ ಘೋಷಣೆಗೂ ಮುನ್ನ ಮಿದುಳಿರಲಿಲ್ವಾ ಎಂಬ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಕಮಲಪಡೆಯಲ್ಲಿ ಸ್ಕಾೃಮ್‌ಗಳಿವೆ. ಕಾಂಗ್ರೆಸ್‌ನಲ್ಲಿ ಏನಿದ್ದರೂ ಜನಪರ ಸ್ಕೀಮ್‌ಗಳು ಮಾತ್ರ. ರಾಜ್ಯ ಸರ್ಕಾರದ ಕುರಿತು ಮಾತನಾಡುವ ಯೋಗ್ಯತೆ ಬಿಜೆಪಿಗರಿಗಿಲ್ಲ ಎಂದು ಕಾಂಗ್ರೆಸ್ ಸ್ಕಾೃಮ್‌ಗಳ ಸರ್ಕಾರವೆಂದ ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಹಿಟ್ಲರ್ ಧೋರಣೆ ಶುರುವಾಗಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ತಿಮ್ಮಾಪೂರ, ಕೇಂದ್ರ ಸಚಿವರು ಚಹಾ ಕುಡಿಯಲಿಕ್ಕಷ್ಟೇ ಸಮರ್ಥರೇ? ಕರ್ನಾಟಕದ ಕುರಿತು ಕಾಳಜಿ ಇರಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ಮೊದಲು ಪ್ರಧಾನಿ ಅವರ ಏಕಚಕ್ರಾಧಿಪತ್ಯ ಧೋರಣೆ ಸರಿಪಡಿಸಿ, ನಂತರ ಮಾತನಾಡಲಿ ಎಂದು ಕುಟುಕಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಡವರ ಕಷ್ಟಗಳ ಅರಿವಿಲ್ಲ ಎನಿಸುತ್ತಿದೆ. ಇದ್ದಿದ್ದರೆ, ಕೇಂದ್ರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವಿರೋಧಿಸುತ್ತಿರಲಿಲ್ಲ. ಗ್ಯಾರಂಟಿಗಳ ಕಥೆ ಏನಾಗುತ್ತದೋ ಎಂಬುದಾಗಿ ವಿರೋಧ ಪಕ್ಷಗಳು ಮುಗಿಬಿದ್ದಿವೆ. ಎಲ್ಲವನ್ನೂ ಈಡೇರಿಸುತ್ತೇವೆ. ಇದಕ್ಕಾಗಿ ಬಿಜೆಪಿ, ಜೆಡಿಎಸ್ ನಾಯಕರಿಗೆ ಜನ ತಿರಸ್ಕರಿಸುವ ಭೀತಿ ಉಂಟಾಗಿದೆ ಎಂದು ಲೇವಡಿ ಮಾಡಿದರು.

ಅನ್ನಭಾಗ್ಯ ತಡವಾಗಲು ಕೇಂದ್ರ ಸರ್ಕಾರವೇ ಕಾರಣ. ಅಕ್ಕಿ ನೀಡದ ಬಿಜೆಪಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ. ಎಲ್ಲಿಂದಲಾದರೂ ತಂದು ಪೂರೈಸಲಿದ್ದೇವೆ ಎಂದು ಭರವಸೆ ನೀಡಿದರು.

ಸರ್ಕಾರ ಆರ್ಥಿಕತೆ ನಿಭಾಯಿಸುವ ಕುರಿತು ಚರ್ಚಿಸಿ ನಂತರವಷ್ಟೇ ಮದ್ಯದ ದರ ನಿಗದಿಗೆ ಕ್ರಮವಹಿಸಲಿದೆ. ಸದ್ಯಕ್ಕೆ ದರ ಏರಿಕೆ ಪ್ರಸ್ತಾಪವಿಲ್ಲ. ಅಬಕಾರಿ ಇಲಾಖೆಯಲ್ಲಿ ಈವರೆಗೂ ಒಂದೂ ವರ್ಗಾವಣೆಯಾಗಿಲ್ಲ. ಇದರಲ್ಲಿ ದಂಧೆ ಆಗುತ್ತಿದೆ ಎಂಬುದೇ ಅಪ್ರಸ್ತುತ ಎಂದು ಹೇಳಿದರು.

ಮಗ್‌ಶಾಟ್ (ಸಿಟಿಡಿ 22 ತಿಮ್ಮಾಪೂರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net