ಕಮರ್ಟೇಶ್ವರ ದೇಗುದಲ್ಲಿ ಶರನ್ನವರಾತ್ರಿ ಪೂಜೆ

ಕಮರ್ಟೇಶ್ವರ ದೇಗುದಲ್ಲಿ ಶರನ್ನವರಾತ್ರಿ ಪೂಜೆ
Published on

ಹಾಸನ: ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮರ್ಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನವೂ ದೇವಿಗೆ ಒಂದೊಂದು ವಿಶೇಷ ಅಲಂಕಾರ ಹಾಗೂ ಹೋಮ, ಪಂಚಾಮೃತ ಅಭಿಷೇಕ ಹಾಗೂ ದೇವರ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶನಿವಾರ ಬ್ರಹ್ಮಚಾರಿಣಿ ಅಲಂಕಾರ ಹಾಗೂ ಶ್ರೀ ಗಾಯತ್ರಿ ವೈಶ್ವಕರ್ಮಣ ಹೋಮ ನೆರವೇರಿತು. ಅರೇಮಾದನಹಳ್ಳಿ ಮಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಪೂರ್ಣಾಹುತಿ ನೆರವೇರಿಸಿದರು.
ನಂತರ ಆಶೀರ್ವಚನ ನೀಡಿದ ಸ್ವಾಮೀಜಿ, ನವರಾತ್ರಿಯ ಪುಣ್ಯ ಕಾಲದಲ್ಲಿ ದೇವಿಯ ಆರಾಧನೆ ಬಹಳ ಶ್ರೇಷ್ಠ. ಪೂರ್ವ ಜನ್ಮದ ಸುಕೃತ ಪುಣ್ಯವಿದ್ದವರು ಮಾತ್ರ ನವರಾತ್ರಿಯಲ್ಲಿ ದೇವಿಯ ಆರಾಧನೆ ಮಾಡಲು ಸಾಧ್ಯ ಎಂದರು. ಈ ಕಾಲದಲ್ಲಿ ಮಾಡುವ ಯಜ್ಞಗಳು ಪರಮಶ್ರೇಷ್ಟ ಫಲಗಳನ್ನು ನೀಡುತ್ತವೆ. ಅದಕ್ಕೆಲ್ಲ ನಾವು ಧರ್ಮವನ್ನು ಆಚರಿಸಬೇಕು. ಧರ್ಮವನ್ನು ಆಚರಿಸಲು ಮೊದಲು ನಮಗೆ ಸಂಸ್ಕಾರ ಬೇಕು ಎಂದು ನುಡಿದರು.
ಈ ನಿಟ್ಟಿನಲ್ಲಿ ಪುರೋಹಿತರಾದ ಪ್ರದೀಪ್ ಶರ್ಮಾ ಅವರು ಸಂಸ್ಕಾರ ಕುರಿತು ಕೆಲ ಪುಸ್ತಕ ಬರೆದು ಮಕ್ಕಳಿಗೆ ಪಾಠ ಮಾಡಿದ್ದಾರೆ. ಇದೀಗ ಸಂಸ್ಕಾರ ಬಾಲ ಧರ್ಮ ಹೆಸರಿನ ಮತ್ತೊಂದು ಪುಸ್ತಕ ಸೇರ್ಪಡೆಯಾಗಿದೆ ಎಂದರು. ಈ ಪುಸ್ತಕ ಧರ್ಮದ ತಿಳುವಳಿಕೆ ನೀಡುತ್ತದೆ. ಸನಾತನ ಪರಂಪರೆಯನ್ನು ಪರಿಚಯಿಸುತ್ತದೆ. ಎಲ್ಲರೂ ಈ ಪುಸ್ತಕವನ್ನು ತಮ್ಮ ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಅ.9 ರಂದು ಸಂಜೆ ನಡೆಯುವ ಸರಸ್ವತಿ ಪೂಜೆಗೆಂದು ಸಾಮೂಹಿಕವಾಗಿ ಮಕ್ಕಳಿಂದ ಸರಸ್ವತಿ ಪೂಜೆ ಹಾಗೂ ಉಚಿತವಾಗಿ ಸಂಸ್ಕಾರ ಬಾಲ ಧರ್ಮ ಪುಸ್ತಕ ವಿತರಣೆ ಮಾಡಿದರು.
ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಕೇಶವಪ್ರಸಾದ್ ಮಾತನಾಡಿ, ನೂರಾರು ವರ್ಷಗಳಿಗೂ ಪುರಾತನವಾದ ಕಾಳಿಕಾಂಬ ಕಮಟೇಶ್ವರ ದೇವಾಲಯ, ಮೈಸೂರು ಮಹಾರಾಜರಿಂದ ಪೋಷಿಸಲ್ಪಟ್ಟ ದೇವಾಲಯ ಆಗಿದೆ. ಮಹಾರಾಜರು ದೇವರಿಗೆ ಸೇವೆ ಸಲ್ಲಿಸಿ ಕರ್ಮಟೇಶ್ವರ ದೇವರಿಗೆ ನೀಡಿದ ಬೆಳ್ಳಿ ಕಿರೀಟವನ್ನು ಇಂದಿಗೂ ನಾವು ನವರಾತ್ರಿಯಲ್ಲಿ ಪೂಜಿಸುತ್ತಿದ್ದೇವೆ. ಅಂದಿನಿಂದ ಆಚರಿಸಿಕೊಂಡು ಬಂದಿರುವ ನವರಾತ್ರಿ ಈಗ ವಿಜೃಂಭಣೆಯಿಂದ ಇಲ್ಲಿ ನೆರವೇರುತ್ತಿದೆ ಎಂದರು.
ಇಂದು ಸಮಾಜದ ಪರವಾಗಿ ಗುರುಗಳಿಗೆ ಪಾದಪೂಜೆ ಹಾಗೂ ಪುಸ್ತಕ ಸಮರ್ಪಣೆ ಕಾರ್ಯಕ್ರಮ ನೆರವೇರಿದೆ. ಸಮರ್ಪಣೆಯಾದ ಪುಸ್ತಕವನ್ನು ಸರಸ್ವತಿ ಪೂಜೆ ದಿನದಂದು ಭಾಗವಹಿಸಿದ ಎಲ್ಲ ಮಕ್ಕಳಿಗೂ ಉಚಿತವಾಗಿ ವಿತರಣೆಯಾಗಲಿದೆ ಎಂದರು. 9 ರಂದು ಸಂಜೆ 7 ಗಂಟೆಗೆ ನಡೆಯುವ ಶಾರದಾ ಪೂಜೆಯಲ್ಲಿ ಭಾಗವಹಿಸಿದ ಮಕ್ಕಳಿಂದ ಸಾಮೂಹಿಕವಾಗಿ ಸರಸ್ವತಿ ಪೂಜೆ ನಂತರದಲ್ಲಿ ಪುಸ್ತಕ ವಿತರಣೆ ಆಗಲಿದೆ. ಹಾಗಾಗಿ ಹೆಚ್ಚು ಮಕ್ಕಳನ್ನು ಪೂಜೆಗೆ ಕರೆತರುವಂತೆ ಕೋರಿದರು. ಎಲ್ಲಾ ವೈದಿಕ ಕಾರ್ಯಕ್ರಮಗಳು ಜಿ.ವೇದಿಕ್ ಗಾಯತ್ರಿದೇವಿ ಪುರೋಹಿತ ಜ್ಯೋತಿಷ್ಯ ಮಂದಿರದ ಪ್ರದೀಪ್‌ಶರ್ಮಾ ಅವರ ನೇತೃತ್ವದಲ್ಲಿ ರವೀಂದ್ರ ಶರ್ಮಾ ಹಾಗೂ ಬ್ರಹ್ಮಾನಂದ, ಕಲ್ಲೇಶಚಾರ್ ಮೊದಲಾದವರ ನೇತೃತ್ವದಲ್ಲಿ ನೆರವೇರಿತು.
ಉಪಾಧ್ಯಕ್ಷ ಬ್ಯಾಟರಂಗಾಚಾರ್, ಪದಾಧಿಕಾರಿಗಳಾದ ಎಚ್.ವಿ.ಹರೀಶ್, ಸುರೇಶ್, ಶ್ರೀಕಂಠ ಮೂರ್ತಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net