ಕಮರಿದ ಭವಿಷ್ಯದ ಕನಸು

ಕಮರಿದ ಭವಿಷ್ಯದ ಕನಸು
Published on

ಕೆ.ಆರ್. ಪ್ರಸಿನ್ ಹಾಸನ

ಎಲ್ಲರೂ 18 ರಿಂದ 25 ವಯೋಮಾನದವರು. ಭವಿಷ್ಯದ ಕನಸು ಕಂಡು ವಿವಿಧ ಭಾಗದಿಂದ ಇಂಜಿನಿಯರಿಂಗ್ ಕಲಿಯಲು ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡಿದ್ದರು.

ಎಂದಿನಂತೆ ತರಗತಿ ಮುಗಿಸಿಕೊಂಡು ಹಾಸ್ಟೆಲ್‌ಗೆ ಬಂದಿದ್ದ ವಿದ್ಯಾರ್ಥಿಗಳು ಗಣಪತಿ ವಿಸರ್ಜನೆ, ಡಿಜೆ ಶಬ್ಧಕ್ಕೆ ಹೆಜ್ಜೆಹಾಕುತ್ತ ಸಂಭ್ರಮದಲ್ಲಿದ್ದರು. ಆದರೆ, ವಿಧಿ ರಾಯನ ಲೆಕ್ಕಚಾರವೇ ಬೇರೆ ಇತ್ತು..!

ಶುಕ್ರವಾರ ರಾತ್ರಿ 8.15ರ ಸುಮಾರು ಜವರಾಯನಂತೆ ಎರಗಿದ ಟ್ರಕ್ 9 ಜನರ ಪ್ರಾಣವನ್ನು ಅರೆ ಕ್ಷಣದಲ್ಲಿ ತೆಗೆದೇ ಬಿಟ್ಟಿತು. ಸಂಭ್ರಮದ ಮನೆಯಾಗಿದ್ದ ಮೊಸಳೆಹೊಸಳ್ಳಿ ನಿಮಿಷಾರ್ಧದಲ್ಲಿ ಸಾವಿನ ಸೂತಕದ ಮನೆಯಾಗಿ ಪರಿವರ್ತನೆಯಾಯಿತು. ಡಿಜೆ ಕುಣಿತಕ್ಕೆ ತೇಯ್ದಿದ್ದ ಮೈ-ಬಟ್ಟೆ ಅರೆಕ್ಷಣದಲ್ಲಿ ಕಣ್ಣೀರು-ರಕ್ತದಿಂದ ಒದ್ದೆಯಾಯಿತು... ಸಂಭ್ರದಲ್ಲಿ ತೇಲುತ್ತಿದ್ದವರು, ನೆರೆದಿದ್ದವರು ಕ್ಷಣಮಾತ್ರದಲ್ಲಿ ಜತೆಗಿದ್ದವರು, ಕುಟುಂಬದವರನ್ನು ಕಳೆದುಕೊಂಡು ನೋವಿನ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಎಂತವರನ್ನು ಮರುಗಿಸುವಂತಿತ್ತು.

ಇನ್ನೊಂದೆಡೆ ಕೈ-ಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ಮಲಗಿರುವ ಮಕ್ಕಳ ಪಾಲಕರ ಗೋಳಾಟ ಕರುಳು ಹಿಂಡುವಂತಿತ್ತು. ಗಣಪತಿ ವಿಸರ್ಜನೆ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ 9 ಜನ ಸಾವಿಗೀಡಾದರೆ, ಮೂವರ ಸ್ಥಿತಿ ಚಿಂತಾಜನಕವಾಗಿದೆ. 25 ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು, ಮೃತಪಟ್ಟವರನ್ನು ಸಾಲು ಸಾಲಾಗಿ ಜಿಲ್ಲಾಸ್ಪತ್ರೆಗೆ ಕರೆ ತರುತ್ತಿದ್ದ ಹೃದಯ ವಿದ್ರಾವಕ ಘಟನೆ ಎಂತವರನ್ನು ಮರುಗಿಸುವಂತಿತ್ತು.

ನನ್ನ ಮಗನನ್ನು ಸಾಯಿಸಿ ಕಳುಹಿಸುತ್ತಿದ್ದೀರ

ಬಳ್ಳಾರಿ ಜಿಲ್ಲೆಯ ನಾಗಲಕೆರೆ ಬೀದಿಯ ಸುಶೀಲಾ ಗಂಡನನ್ನು ಕಳೆದು ಕೊಂಡು ಮನೆ-ಮನೆಯಲ್ಲಿ ಪಾತ್ರೆ ತೊಳೆದು ಮಗ ಪ್ರವೀಣ್‌ನನ್ನು ಇಂಜಿನಿಯರ್ ಮಾಡಿಸಬೇಕೆಂಬ ಕನಸು ಹೊತ್ತಿದ್ದಳು. ಕ್ಷಣಮಾತ್ರದಲ್ಲಿ ಟ್ರಕ್ ರೂಪದಲ್ಲಿ ಮೇಲೆರಗಿದ ದುರ್ವಿಧಿಗೆ ಮಗನನ್ನು ಕಳೆದುಕೊಂಡು ಅಕ್ಷರಸಹ ಜರ್ಜರಿತರಾಗಿದ್ದರು. ಅಂತಿಮ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿದ್ದ ಮಗ ಇನ್ನೊಂದು ವರ್ಷ ಮಾತ್ರ ನೀನು ಕೆಲಸಮಾಡು. ಇನ್ನು ಮುಂದೆ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದಿದ್ದ. ಈಗ ಮಗನೇ ಇಲ್ಲ ಎಂದು ಭಾವುಕರಾದರು. ಮನೆಯನ್ನು ಬೆಳಗಬೇಕಿದ್ದ ಮಗನಿಲ್ಲದ ಮೇಲೆ ನಮಗೂ ಜೀವ ಬೇಡ ಎಂದು ಅಕ್ಕ ಜಯಶ್ರೀ ಹಾಗೂ ಸುಶೀಲಾ ಗೋಳಾಡಿದರು. ಇಂಜಿನಿಯರಿಂಗ್ ಮಾಡಿಕೊಂಡು ಬಾ ಎಂದು ನನ್ನ ಮಗನನ್ನು ನಿಮ್ಮೂರಿಗೆ ಕಳುಹಿಸಿದ್ದೆ, ನೀವು ನನ್ನ ಮಗನನ್ನು ಸಾಯಿಸಿ ಕಳುಹಿಸುತ್ತಿದ್ದೀರ ಎಂದು ಗೋಳಾಡಿದರು.

ಚಕ್ರದ ಮಧ್ಯೆ ಮಲಗಿ ಬಚಾವ್ ಆದೆ

ಡಿಜೆ ಶಬ್ಧಕ್ಕೆ ಹೆಜ್ಜೆಹಾಕುತ್ತಿದ್ದಾಗ ದಿಢೀರ್ ಸಂಭವಿಸಿದ ಅಪಘಾತದಲ್ಲಿ ಜತೆಗಿದ್ದವರೆಲ್ಲ ಲಾರಿಯ ಚಕ್ರದಡಿ ಸಿಲುಕಿ ಕಣ್ಣೆದುರೇ ಪ್ರಾಣ ಬಿಟ್ಟರು. ಕೂದಲೆಳೆ ಅಂತರಲ್ಲಿ ಎರಡು ಬದಿಯ ಚಕ್ರಗಳ ಮಧ್ಯೆ ಸಿಲುಕಿದ್ದರಿಂದ ಪ್ರಾಣ ಉಳಿಯಿತು ಎಂದು ಅರಸೀಕೆರೆಯಿಂದ ಬಂದು ಮೊಸಳೇ ಹೊಸಳ್ಳಿಯಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿಷ್ಣು ಕಣ್ಣೀರಾದರು. ಕಣ್ಣೆದುರೇ ಜತೆಗಿದ್ದವರು ಸತ್ತು ಬಿದ್ದರು. ಹತ್ತಾರು ಜನ ಗಾಯಗೊಂಡರು ಇಂತರ ಸ್ಥಿತಿ ಯಾರಿಗೂ ಬಾರದಿರಲಿ ಎಂದು ನುಡಿದರು.

ಮಗ ಉಳಿದುಕೊಳ್ಳುತ್ತಿದ್ದ

ಈಗ ಕಾಯುವ ಬದಲು ಮೊದಲೇ ಕಾದಿದ್ದರೆ ನನ್ನ ಮಗ ಉಳಿದುಕೊಳ್ಳುತ್ತಿದ್ದ ಎಂದು ಮಗ ಈಶ್ವರ್(17)ನನ್ನು ಕಳೆದುಕೊಂಡ ಡನಾಯಕನಹಳ್ಳಿ ರವಿಕುಮಾರ್ ಪೊಲೀಸರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಮಗನನ್ನು ಕಳೆದುಕೊಂಡು ಹಿಮ್ಸ್ ಶವಾಗಾರದ ಎದುರು ಮೃತದೇಹಕ್ಕಾಗಿ ಕಾದು ಕುಳಿತ್ತಿದ್ದ ರವಿಕುಮಾರ್ ಅವರ ಗೋಳಾಟದ ದನಿ ಇದಾಗಿತ್ತು. ಎಲ್ಲಾ ಮುಗಿದ ಮೇಲೆ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದೀರಿ. ಮಗನನ್ನು ಒಂದು ಇಲ್ಲ ಎನ್ನುವ ರೀತಿ ಸಾಕಿದ್ದೆ. ಅವನ್ನು ಕೇಳಿದನ್ನೆಲ್ಲ ತೆಗೆದುಕೊಟ್ಟಿದ್ದೆ. ಈಗ ನೀವು ನನ್ನ ಮಗನನ್ನು ತೆಗೆದುಕೊಡುತ್ತೀರ ಎಂದು ಗೋಳಾಡಿದರು.

ಮೆರವಣಿಗೆ ನೋಡಲು ಹೋಗಿದ್ದೆವು

ಹಾಸ್ಟೆಲ್‌ನಲ್ಲಿ 150 ಜನ ಇದ್ದೆವು. ಬಹುತೇಕ ಎಲ್ಲರೂ ಗಣಪತಿ ವಿಸರ್ಜನೆ ಜಾಗಕ್ಕೆ ಬಂದಿದ್ದಾರೆ. ಮಧ್ಯಾಹ್ನ ಒಂದು ಗಂಟೆಯಿಂದಲೇ ಗಣಪತಿ ಮೆರವಣಿಗೆ ನಡೆಯುತ್ತಿತ್ತು. ನಾವು ರಾತ್ರಿ ಊಟ ಮುಗಿಸಿಕೊಂಡು ಗಣಪತಿ ಮರವಣಿಗೆ ನೋಡಲು ಸ್ಥಳಕ್ಕೆ ಬಂದೆವು. ನೋಡ ನೋಡುತ್ತಿದ್ದಂತೆ ಮೆರವಣಿಗೆಯಲ್ಲಿದ್ದವರ ಮೇಲೆ ಟ್ರಕ್ ನುಗ್ಗಿ ಬಂತು. ನಮಗೆ ಸಣ್ಣಪುಟ್ಟ ಗಾಯಗಳಾಗಿವೆ. ನಮ್ಮ ಹಾಸ್ಟೆಲ್ 3 ಜನ ಸಾವಿಗೀಡಾಗಿದ್ದಾರೆ. 15 ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶಿವಮೊಗ್ಗದ ಕಿರಣ್ ಹೇಳಿದರು.

ಹುಟ್ಟು ಹಬ್ಬದ ದಿನ ಮಿಥುನ್ ಸಾವು

ಹುಟ್ಟುಹಬ್ಬದ ದಿನವೇ ಮೊಳಹೊಸಳ್ಳಿ ಘೋರ ದುರಂತದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಮಿಥುನ್ ಸಾವಿಗೀಡಾಗಿದ್ದಾರೆ.

ಬಳ್ಳಾರಿ ಜಿಲ್ಲೆ, ಹೊಸದುರ್ಗದ ಮಿಥುನ್ ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಮಧ್ಯರಾತ್ರಿಯೇ ಹಾಸ್ಟೆಲ್‌ನಲ್ಲಿ ಸಹಪಾಠಿಗಳು ಮಿಥುನ್ ಬರ್ತಡೆ ಆಚರಿಸಿದ್ದರು. ಸಂಜೆಯವರೆಗೂ ಜತೆಗಿದ್ದ ಮಿಥುನ್ ಗಣಪತಿ ಮೆರವಣಿಗೆಗೆ ತೆರಳಿ ಧಾರುಣವಾಗಿ ಸಾವಿಗೀಡಾಗಿದ್ದಾನೆ ಎಂದು ಸ್ನೇಹಿತರು ಭಾವುಕರಾದರು.

ಕೂದಲೆಳೆ ಅಂತರದಲ್ಲಿ ಪಿಎಸ್‌ಐ ಪಾರು

ಮೊಸಳೆಹೊಸಳ್ಳಿ ಬಳಿ ಭೀಕರ ದುರಂತ ಪ್ರಕರಣದಲ್ಲಿ ಪಿಎಸ್‌ಐ ಧನರಾಜ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಟ್ರಕ್ ಬೈಕ್‌ಗೆ ಡಿಕ್ಕಿಯಾಗುವ ಕೆಲವು ಸೆಕೆಂಡುಗಳ ಮೊದಲು ಪಿಎಸ್‌ಐ ಧನರಾಜ್ ಮುಂದೆ ಸಾಕಿದ್ದಾರೆ.

ಗೊರೂರು ಠಾಣೆಯ ಪಿಎಸ್‌ಐ ಧನರಾಜ್ ಗಣೇಶೋತ್ಸವ ಹಿನ್ನೆಲೆ ಭದ್ರತೆಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net