ಕಮಟೆ ಸುತ್ತಮುತ್ತ ಹೆಚ್ಚಿದ ಕಾಡಾನೆ ಹಾವಳಿ

26 gkl 02
ಮಾಯಮುಡಿ ಗ್ರಾಮದ ಬಲ್ಯಂಡ ಸುಧೀರ್ ಎಂಬುವರರ ತೋಟದಲ್ಲಿ ಕಾಡಾನೆಗಳ ದಾಳಿಗೆ ಹಾನಿಯುಂಟಾಗಿರುವುದು.
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಕಮಟೆ ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗದ್ದೆ ಹಾಗೂ ಕಾಫಿ ತೋಟ ಹಾಳಾಗಿದೆ.

ಬಲ್ಯಂಡ ಸುಧೀರ್ ಎಂಬುವವರ ತೋಟಕ್ಕೆ ಮಂಗಳವಾರ ದಾಳಿ ಮಾಡಿದ ಆನೆಗಳು, ಮನಸೋಇಚ್ಛೆ ಓಡಾಡಿ ಫಸಲನ್ನು ತುಳಿದು ನಾಶಪಡಿಸಿವೆ. ನಿರಂತರವಾಗಿ ಬಾಳಾಜಿ ಗ್ರಾಮದ ಕಮಟೆಯ ಸುತ್ತಮುತ್ತ ನಾಲ್ಕರಿಂದ ಐದು ಆನೆಗಳ ಹಾವಳಿ ಹೆಚ್ಚಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಅತ್ತ ತೆರಳುತ್ತಿದ್ದಂತೆ ಆನೆಗಳ ಹಿಂಡು ಮತ್ತೊಂದು ತೋಟದಲ್ಲಿ ಪ್ರತ್ಯಕ್ಷವಾಗುತ್ತಿವೆ. ವರ್ಷಪೂರ್ತಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಈ ಭಾಗದಲ್ಲಿ ಎದುರಾಗಿದೆ. ಇನ್ನು ತೋಟದ ಕೆಲಸ, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮನೆಯಿಂದ ಹೊರಬರಲು ಕಷ್ಟಸಾಧ್ಯವಾಗಿದೆ. ಗ್ರಾಮದ ಜನರು ದೂರದ ಊರಿಗೆ ಹೋಗಿ ರಾತ್ರಿ ಮತ್ತೆ ಹಿಂದಿರುಗಲು ಹಿಂಜರಿಯುವಂತಾಗಿದೆ.

ಭತ್ತದ ನಾಟಿ ಮಾಡಿದ ರೈತರು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದು, ಬೆಳೆ ಹಾಳಾಗಬಹುದೆಂಬ ಭೀತಿಯಲ್ಲಿದ್ದಾರೆ. ಇದರಿಂದಾಗಿ ಕೆಲವರು ಭತ್ತದ ಕೃಷಿಯನ್ನೇ ಕೈ ಬಿಟ್ಟಿದ್ದಾರೆ. ಕಾಫಿ ಗಿಡ ಹಾಗೂ ಫಸಲು ಈ ಭಾಗದಲ್ಲಿ ಹೆಚ್ಚು ನಾಶವಾಗುತ್ತಿದ್ದು ಕಾಡಾನೆ ಹಾವಳಿಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗು ಕ್ಷೇತ್ರದ ಶಾಸಕರು ಗಮನಹರಿಸಬೇಕು ಎಂದು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ರಮೇಶ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net