ಕಬ್ಬು ಬೆಳೆಯಿಂದ ಬಾಳು ಹಸನು

02 Hg Photo
ಯಶಸ್ವಿ ರೈತ ಎ.ಆರ್.ಈಶ್ವರಪ್ಪ ಗದ್ದೆಯಲ್ಲಿ ಕಬ್ಬು ಬೆಳೆದಿರುವುದು.
Published on

ಹಗರೆ: ರೋಗರಹಿತವಾದ ಕಬ್ಬು ಬೆಳೆದು ಲಾಭ ಕಂಡುಕೊಂಡಿರುವ ಯಶಸ್ವಿ ಪ್ರಗತಿಪರ ರೈತ ಆಂದಲೆ ಈಶ್ವರಪ್ಪ ಮಾದಿಹಳ್ಳಿ ಹೋಬಳಿಯಲ್ಲೇ ಕಬ್ಬು ಬೆಳೆಯುವುದರಲ್ಲಿ ಮೊದಲಿಗ ಎನಿಸಿಕೊಂಡಿದ್ದಾರೆ.

ಕಬ್ಬು ಬೆಳೆಯಿಂದ ರೈತಾಪಿ ವರ್ಗ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಇವರು ಮಾತ್ರ ಕಬ್ಬು ಬೆಳೆದು ಬದುಕಿನಲ್ಲಿ ಸಿಹಿ ತುಂಬಿಕೊಂಡಿದ್ದಾರೆ. ಮಾದಿಹಳ್ಳಿ ಹೋಬಳಿ ಅಂದಲೆ ಗ್ರಾಮದ ನಿವಾಸಿ ಈಶ್ವರಪ್ಪ ಕೃಷಿ ಕುಟುಂಬದಿಂದ ಬಂದವರು. ಕಬ್ಬು ಬೆಳೆಯುವಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು, ಪ್ರಸ್ತುತ ಕಬ್ಬು ಕೃಷಿಯಲ್ಲಿ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ತಮಗಿದ್ದ ಆರು ಎಕರೆ ಜಮೀನಿನಲ್ಲಿ ಸಣ್ಣ ಪ್ರಮಾಣದಲ್ಲಿ ಕಬ್ಬು ಬೆಳೆಯಲು ಪ್ರಾರಂಭಿಸಿದ್ದು, ಪ್ರಸ್ತುತ ಹೆಚ್ಚು ಭೂ ಪ್ರದೇಶದಲ್ಲಿ ಕಬ್ಬು ಬೆಳೆಯುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ.

ತಮ್ಮ ಜಮೀನು ಅಲ್ಲದೆ ಅಕ್ಕಪಕ್ಕದ ಗ್ರಾಮಗಳಾದ ಶಿವಯೋಗಿಪುರ, ಮಲ್ಲಿಕಾರ್ಜುನಪುರ, ರಾಮಚಂದ್ರಪುರ ಗ್ರಾಮದ ರೈತರಿಂದ ಸುಮಾರು ಹತ್ತರಿಂದ ಹದಿನೈದು ಎಕರೆಯನ್ನು ಗುತ್ತಿಗೆಗೆ ಪಡೆದಿರುವ ಈಶ್ವರಪ್ಪ, ಆ ಭೂಮಿಯಲ್ಲೂ ಕಬ್ಬು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕಬ್ಬಿನ ತಳಿ 516 ಅನ್ನು ಬಿತ್ತನೆ ನಾಟಿಯನ್ನಾಗಿ ಮಾಡುತ್ತಿದ್ದು, ಒಂದು ಭಾರಿ ಇದನ್ನು ನಾಟಿ ಮಾಡಿದರೆ ವರ್ಷ ಕ್ಕೊಂದು ಬೆಳೆಯಂತೆ ಸತತ ಆರು ಭಾರಿ ಫಸಲು ಕಟಾವು ಮಾಡುತ್ತಿದ್ದಾರೆ. ಒಂದು ಎಕರೆಯಲ್ಲಿ 55 ರಿಂದ 60 ಟನ್ ಕಬ್ಬು ಬೆಳೆಯುವ ಇವರು, ನೇರವಾಗಿ ಕಬ್ಬನ್ನು ಚನ್ನರಾಯಪಟ್ಟಣ ಹಾಗೂ ಶ್ರೀನಿವಾಸಪುರ ಕಬ್ಬಿನ ಕಾರ್ಖಾನೆಗೆ ಕಳುಹಿಸುತ್ತಾರೆ.

ಭೂಮಿ ಹಸನಾಗಲೆಂದು ಪ್ರತಿ ವರ್ಷ ಎಕರೆಗೆ 30,000 ರೂ. ಖರ್ಚು ಮಾಡಲಾಗುತ್ತಿದ್ದು, ಪ್ರತಿ ಟನ್‌ಗೆ ಪ್ರಸ್ತುತ 2,000 ರೂ. ಬೆಲೆ ಇದ್ದು, ಇದರಂತೆ ತೊಂಬತ್ತು ಸಾವಿರದಿಂದ ಒಂದು ಲಕ್ಷ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಕಬ್ಬು ಬೆಳೆ ಕಡಿಮೆ ಖರ್ಚಿನ ದ್ದಾಗಿದ್ದು ಅಧಿಕ ಲಾಭಾಂಶ ಪಡೆಯಬಹುದಾಗಿದೆ. ಅಲ್ಲದೆ ಹೆಚ್ಚಾಗಿ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಇದಲ್ಲದೆ ಹವಾಮಾನದಲ್ಲಾಗುವ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಕಬ್ಬಿಗಿದ್ದು ನೀರನ್ನು ಮಾತ್ರ ಹೆಚ್ಚಾಗಿ ಹರಿಸಬೇಕಾಗುತ್ತದೆ.

ಒಮ್ಮೆ ನಾಟಿ ಮಾಡಿ ಸತತ ಆರು ವರ್ಷ ಬೆಳೆ ಬೆಳೆದು ಲಾಭ ಮಾಡುವ ಬೆಳೆ ಇದಾಗಿದೆ ಎಂಬುದು ಈಶ್ವರಪ್ಪ ಅವರ ಸಲಹೆ.
ಬೇಕರಿ ಉದ್ಯೋಗದೊಂದಿಗೆ ಕೃಷಿಯನ್ನೂ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಪತ್ನಿ ಸಹಕಾರ ಪಡೆಯುವ ಇವರು, ಟೊಮ್ಯಾಟೊ, ಬೀನ್ಸ್ ಅನ್ನೂ ಬೆಳೆಯುತ್ತಾರೆ. ಬಿಡುವಿನ ಸಮಯದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಧಾರ್ಮಿಕ ಚಟುವಟಿಕೆಗಳ ಪ್ರಚಾರಕರಾಗಿ ಕೆಲಸ ಮಾಡಿರುವ ಹೆಗ್ಗಳಿಕೆ ಇವರದ್ದು. ಅಲ್ಲದೆ ಧರ್ಮ ಸಮ್ಮೇಳನಗಳ ಮುಂದಾಳತ್ವವನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆದಿರುವ ಕೀರ್ತಿ ಇವರಿಗಿದೆ. ಇದೆಲ್ಲದೆರ ನಡುವೆ ಕಬ್ಬನ್ನು ತಮ್ಮ ಜೀವನಾಧಾರ ಎಂದುಕೊಂಡು ಸಮೃದ್ಧಿಯಾಗಿ ಬೆಳೆ ಬೆಳೆದು ಬದುಕನ್ನು ಹಸನಾಗಿಸಿಕೊಂಡಿದ್ದಾರೆ.

ವರ್ಷದ ಯಾವುದೇ ಸಮಯದಲ್ಲಾದರೂ ಕಬ್ಬನ್ನು ನಾಟಿ ಮಾಡಬಹುದು. ಆದರೆ ಚಳಿಗಾಲದಲ್ಲಿ ನಾಟಿ ಮಾಡಿದರೆ ಮೊಳಕೆ ಬರುವುದು ನಿಧಾನ. ಕೃಷಿ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿದ ನಂತರ ಕಬ್ಬು ಬಿತ್ತನೆ ಮಾಡಬೇಕು. ನಾಲ್ಕು ಅಡಿ ಅಂತರದಲ್ಲಿ ಸಾಲು ಮಾಡಿ, ಒಂದು ಗುಣಿಯಿಂದ ಮತ್ತೊಂದು ಗುಣಿಗೆ ಒಂದು ಅಡಿ ಅಂತರದಲ್ಲಿ ನೆಟ್ಟರೆ ಎಕರೆಗೆ 6,500 ರಿಂದ 7,000 ಬಿತ್ತನೆ ಮಾಡಬಹುದು.

ಬಿತ್ತನೆ ಸಮಯದಲ್ಲಿ ಗಿಣ್ಣಿನ ಕಣ್ಣು ಪಕ್ಕದಲ್ಲಿರುವಂತೆ ನೋಡಿಕೊಳ್ಳುವುದು ಬಹುಮುಖ್ಯ ಎನ್ನುತ್ತಾರೆ ಈಶ್ವರಪ್ಪ. ಬಿತ್ತನೆ ನಂತರ ಎರಡು ವಾರದಲ್ಲಿ ಮೊದಲ ಕಳೆ ತೆಗೆಯಬೇಕು. ಆರು ತಿಂಗಳಲ್ಲಿ ಎರಡನೇ ಬಾರಿ ಕಳೆ ತೆಗೆಯಬೇಕು. ಮಾರುಕಟ್ಟೆಯಲ್ಲಿ ಕಳೆನಾಶಕ ಲಭ್ಯವಿರುವುದರಿಂದ ಒಮ್ಮೆ ಸಿಂಪಡಿಸಿದರೆ ಸಾಕು, ನಂತರ ಮೇಲು ಗೊಬ್ಬರವಾಗಿ ರಸಾಯನಿಕ ಗೊಬ್ಬರ ನೀಡಿದರೆ ಫಸಲು ಬಂದಂತೆ. ಆದರೆ ನೀರಿನ ಕೊರತೆ ಆಗಬಾರದು. ಬೆಳೆ ಒಣಗದಂತೆ ಸಮೃದ್ಧವಾಗಿ ನೀರು ಹರಿಸುತ್ತಿರಬೇಕು. ಆಗ ಫಲವತ್ತತೆ ಹಾಗೂ ತೂಕವನ್ನು ನಾವು ಹೆಚ್ಚು ನಿರೀಕ್ಷಿಸಬಹುದು ಎಂಬುದು ಈಶ್ವರಪ್ಪ ಅವರ ಅನುಭವದ ಮಾತು. ಒಮ್ಮೆ ಕಟಾವಾದ ನಂತರ ಬುಡಕ್ಕೆ ಮಣ್ಣು ಏರಿಸಿ ಗೊಬ್ಬರ ಹಾಕಿದರೆ ಮುಂದಿನ ಫಸಲನ್ನು ನಿರೀಕ್ಷಿಸಬಹುದು.

ಶುಂಠಿ ಬೆಳೆಯಲು ಹೋಗಿ ಜಮೀನಿನ ಫಲವತ್ತತೆ ಕಳೆದುಕೊಳ್ಳುವುದರ ಜತೆಗೆ ನಷ್ಟ ಅನುಭವಿಸುವ ಬದಲು ಕಬ್ಬಿನಂತಹ ಕಡಿಮೆ ಖರ್ಚಿನ ಬೆಳೆ ಬೆಳೆದು ಲಾಭ ಮಾಡಿಕೊಳ್ಳಬಹುದು. ಕೃಷಿ ಇಲಾಖೆಯೂ ರೈತರಿಗೆ ಹೆಚ್ಚು ಮಾಹಿತಿ ನೀಡಿ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕಿದೆ. ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು.
ಎ.ಆರ್.ಈಶ್ವರಪ್ಪ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net