ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಗುರುವಾರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ದೊಡ್ಡರಾಯ ಪೇಟೆ ಗೇಟ್ ಹತ್ತಿರ ಜಮಾಯಿಸಿದ ಪ್ರತಿಭಟನಾಕಾರರು, ರಸ್ತೆ ತಡೆ ಚಳವಳಿ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ರೈತರ ಜತೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮಾಡಬೇಕೆಂದು ಒತಾಯಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಆ.15 ರಂದು ದೇಶಕ್ಕೆ ಸ್ವತಂತ್ರ ಬಂದಿದೆ. ನಾವೆಲ್ಲರೂ ಸ್ವತಂತ್ರರು ಎಂದು ವಿಜೃಂಭಣೆಯಿಂದ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತದೆ. ಆದರೆ ರೈತರ ಪಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಯಾವುದೇ ಸ್ವಾತಂತ್ರ್ಯ ಸಿಗದಂತಾಗಿದೆ ಎಂದು ಟೀಕಿಸಿದರು.
ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ 4500 ರೂ.ನಿಗದಿ ಮಾಡಬೇಕು. ಕಬ್ಬು ಕಟಾವು ಮತ್ತು ಸಾಗಾಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು. ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿಯ ಮೋಸ ತಪ್ಪಿಸಲು ರೈತರು ಹಾಗೂ ತಜ್ಞರ ಸಮಿತಿ ರಚಿಸಬೇಕು. ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಬೇಕು. ಕಳೆದ ಸಾಲಿನ 950 ಕೋಟಿ ರೂ.ಕಬ್ಬಿನ ಉಪ ಉತ್ಪನ್ನಗಳ ಬಾಕಿಯನ್ನು ಸರ್ಕಾರ ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ರಸಗೊಬ್ಬರದ ಪೂರೈಕೆ ವಿಚಾರದಲ್ಲಿ ರಾಜಕಾರಣ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಲ್ಲಿ ರಾಜಕೀಯ ಮಾಡುತ್ತೇವೆ. ರಸಗೊಬ್ಬರದ ಸಮರ್ಪಕ ಪೂರೈಕೆಯು ಸರ್ಕಾರಗಳ ಜವಾಬ್ದಾರಿಯಾಗಿದ್ದು, ಯಾವುದೇ ಗೊಂದಲವಿಲ್ಲದೆ ಪೂರೈಕೆಯ ಕ್ರಮ ಕೈಗೊಳ್ಳಬೇಕು.
ಕೃತಕ ಅಭಾವ ಸೃಷ್ಟಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮಾರಾಟ ಮಾಡುವವರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಲು ಹುನ್ನಾರ ನಡೆಯುತ್ತಿದೆ. ಸ್ಮಾರ್ಟ್ ಮೀಟರ್ ಹಾಕುವ ಮೂಲಕ ವಿದ್ಯುತ್ ಖಾಸಗೀಕರಣ ಮಾಡಿ ಹಣ ವಸೂಲಿಗೆ ಸರ್ಕಾರಗಳು ಮುಂದಾಗುತ್ತಿವೆ. ಅಕ್ರಮ-ಸಕ್ರಮ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟರೆ 24 ಗಂಟೆಯೊಳಗೆ ಬದಲಾಯಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಚಾಮುಲ್‌ನಲ್ಲಿ ಐಸ್‌ಕ್ರೀಮ್ ಘಟಕ ಸ್ಥಾಪನೆಗೆ ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇದು ಜಿಲ್ಲೆ ಅಭಿವೃದ್ಧಿ ಹಾಗೂ ಹಾಲು ಉತ್ಪಾದಕರರ ರಕ್ಷಣೆಗೆ ಇದು ಪೂರಕವಾಗಿರುತ್ತದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಸತೀಶ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ಬಸವರಾಜು, ಪ್ರಭುಸ್ವಾಮಿ, ನರಸಮಂಗಲ ನಾಗಮಲ್ಲಪ್ಪ, ಗುರುವಿನಪುರ ಮೋಹನ್, ಚಂದ್ರು, ರಾಜು ಇತರರು ಪಾಲ್ಗೊಂಡಿದ್ದರು.