ಕಬ್ಬು ಬೆಳೆಗಾರರ ಸಭೆ ಕರೆಯುವಂತೆ ಮನವಿ

11rajesh4
Published on

ಚಾಮರಾಜನಗರ: ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೂ ರೈತ ಮುಖಂಡರು, ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರಸಭೆಯಲ್ಲಿ ಜಿಲ್ಲಾಧಿಕಾರಿಗಳು ಕರೆಯಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಯನ್ನು ಆಲಿಸುವಂತೆ ಕೋರಲಾಯಿತು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೂ ಮುನ್ನಾ ಕಬ್ಬುಬೆಳೆಗಾರರ ಸಭೆಯನ್ನು ಕರೆದು ಸಮಸ್ಯೆಯನ್ನು ಆಲಿಸಬೇಕು. ಪ್ರಸಕ್ತ ಸಾಲಿನಲ್ಲಿ 4,500 ರೂ, ದರವನ್ನು ನಿಗದಿಗೆ ಮಾಡಬೇಕು. ಕಟಾವು ಮತ್ತು ಸಾಗಾಣಿಕೆಯನ್ನು ಎಸ್‌ಎಪಿ ಕಮಿಟಿಯ ನಿರ್ಧಾರದಂತೆ ಮಾಡಬೇಕು. ಮನಬಂದಂತೆ ಕಟಾವು ಸಾಗಾಣಿಕೆ ಕೂಲಿಯನ್ನು ಕಾರ್ಖಾನೆ ಅವರು ನಿಗದಿ ಮಾಡುವುದು ನಿಲ್ಲಬೇಕು. ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರವನ್ನು ಅಳವಡಿಸಬೇಕು. ಸಕ್ಕರೆಯ ಇಳುವರಿಯಲ್ಲಿ ಮೋಸ ತಪ್ಪಿಸಲು, ಸ್ಥಳೀಯ ರೈತ ಮುಖಂಡರ ತಜ್ಞರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಗೆ ಸಕ್ಕರೆ ಆಯುಕ್ತರನ್ನು ಕರೆಸಿ ಸಭೆ ನಡೆಸಬೇಕು. ಕಬ್ಬು ಕಟಾವಾದ 14 ದಿನದ ಒಳಗೆ ರೈತರ ಹಣ ಪಾವತಿಯಾಗಬೇಕು. ರೈತರು ತಮ್ಮ ಕಬ್ಬನ್ನು ಸ್ವಂತ ವಾಹನದಲ್ಲಿ ಸಾಗಿಸಲು ಅವಕಾಶ ನೀಡಬೇಕು. ಸಕ್ಕರೆ ಕಾರ್ಖಾನೆಯ ಲಾಭಾಂಶವನ್ನು ಅರಿಯಲು ಸುಮಾರು 10 ವರ್ಷಗಳ ಬ್ಯಾಲೆನ್ಸ್ ಶೀಟ್‌ಅನ್ನು ಜಿಲ್ಲಾಡಳಿತ ತರಿಸಿಕೊಳ್ಳಬೇಕು. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸಭೆ ನಡೆಸಿ ರೈತರ ಸಮಸ್ಯೆ ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮೈಸೂರು ಜಿಲ್ಲಾಧ್ಯಕ್ಷ ಗಣೇಶ್, ಹನುಮಯ್ಯ, ನಾಗೇಂದ್ರ, ಪ್ರಕಾಶ್ ಗಾಂಧಿ, ಮಲೆಯೂರು ಮಹೇಂದ್ರ, ಮುದ್ದಳ್ಳಿ ಮಧು, ಗುರುವಿನಪುರ ಚಂದ್ರು, ಆನಂದ, ರಾಮಣ್ಣ, ಬಸವಣ್ಣ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net