ಕಬ್ಬಿನ ಹಣ ನೀಡದಿದ್ದರೆ ಮುತ್ತಿಗೆ

Rait Sang
Published on

ಬೀದರ್: ಕಾರ್ಖಾನೆಗೆ ಸಾಗಿಸಿದ ಕಬ್ಬಿನ ಹಣ ಪಾವತಿ ಮತ್ತು ಅತಿವೃಷ್ಟಿ ಪರಿಹಾರ ಬೇಗ ನೀಡದಿದ್ದಲ್ಲಿ ಕೆಡಿಪಿ ಸಭೆ(ಫೆ.8ಕ್ಕೆ) ದಿನ ಪ್ರತಿಭಟನೆ ನಡೆಸುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ರೈತ ಸಂಘ (ಕೋಡಿಹಳ್ಳಿ ಬಣ) ಎಚ್ಚರಿಕೆ ನೀಡಿದೆ.

ಸಂಘದ ಪ್ರಮುಖು ಬುಧವಾರ ಇಲ್ಲಿನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದರೆ ಇನ್ನೂ ಪರಿಹಾರ ಕೊಡದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಮಾಡಿದರೆ ಎರಡು ವಾರದೊಳಗೆ ಹಣ ನೀಡಬೇಕೆಂಬ ನಿಯಮ ಇಲ್ಲಿ ಯಾರೂ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳ ಸಭೆ ಕರೆದು, ಟನ್ ಕನ್ಬಿಗೆ 2400 ರೂ. ಬೆಲೆ ನಿಗದಿ ಮಾಡಲಾಗಿದೆ. ಆದರೆ ಈವರೆಗೆ ಈ ದರದಂತೆ ಯಾವೊಬ್ಬ ರೈತರಿಗೆ ಹಣ ನೀಡಿಲ್ಲ. ಕಬ್ಬಿನ ಹಣ ಹಾಗೂ ಅತಿವೃಷ್ಟಿ ಪರಿಹಾರ ಕೆಡಿಪಿ ಸಭೆಗೂ ಮುನ್ನ ನೀಡಬೇಕು. ನಿರ್ಲಕ್ಷೃ ಮಾಡಿದರೆ ಸಭೆಯಲ್ಲಿ ಸಚಿವರಿಗೆ ಮುತ್ತಿಗೆ ಹಾಕುವುದು ಅನಿವಾರ್ಯ ಎಂದು ಹೇಳಿದ್ದಾರೆ.

ದಿನದ 24 ತಾಸು ವಿದ್ಯುತ್ ನೀಡಬೇಕು. ತೊಗರಿ ಖರೀದಿ ಕೇಂದ್ರ ತ್ವರಿತ ತೆರೆಯಬೇಕು. ಬಿಎಸ್ ಎಸ್ ಕೆಯಲ್ಲಿ 7-8 ಕೋಟಿ ರೂ. ಮೌಲ್ಯದ ಸಕ್ಕರೆ ದಾಸ್ತಾನಿದೆ. ಇದನ್ನು ತಕ್ಷಣ ಮಾರಾಟ ಮಾಡಿ ರೈತರಿಗೆ ಬಾಕಿ ಹಣ ನೀಡಬೇಕು. ಕಾರಂಜಾ ಯೋಜನೆಯಲ್ಲಿ ಭೂಸ್ವಾಧೀನ ಆಗದ ಭೂಮಿಯಲ್ಲಿ ನಿಂತಿರುವ ಹಿನ್ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಬೇಡಿಕೆ ಸಂಬಂಧಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಚಂದ್ರಶೇಖರ ಜಮಖಂಡಿ, ಸಿದ್ದಣ್ಣ ಭೂಶೆಟ್ಟಿ, ಪ್ರಕಾಶ ಬಾವಗೆ, ಕಾಶಪ್ಪ ಶೇರಿಕಾರ, ಮಲ್ಲಿಕಾರ್ಜುನ ಬಿರಾದಾರ, ರಾಜಕುಮಾರ ಪಂಚಾಳ, ಸತೀಶ ನನ್ನೂರೆ, ಪ್ರವೀಣ ಕುಲಕರ್ಣಿ, ವೀರಭೂಷಣ ನಂದಗಾಂವೆ, ಚಂದ್ರಶೇಖರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net