

ಕಲಬುರಗಿ: ರೇಣುಕಾ, ಕೆಪಿಆರ್ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ಗೆ ಕಬ್ಬಿಗೆ ನೀಡಬೇಕಾಗಿರುವ ಎಫ್‌ಆರ್‌ಪಿ ಬಾಕಿಯನ್ನು ಬಿಡುಗಡೆ ಮಾಡಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ಹಾವಳಗಾದ ರೇಣುಕಾ ಶುಗರ್ಸ್ ಹಾಗೂ ಚಿಣಮಗೇರಾದ ಕೆಪಿಆರ್ ಸಕ್ಕರೆ ಕಾರ್ಖಾನೆ ರೈತರಿಗೆ ಎಫ್‌ಆರ್‌ಪಿ ಪ್ರಕಾರ ನೀಡಬೇಕಿರುವ ಬಾಕಿ ಹಣ ಬಿಡುಗಡೆಗೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರೇಣುಕಾ ಶುಗರ್ಸ್ ಎಫ್‌ಆರ್‌ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ ೧೧೨ರಂತೆ ೨೩ ಸಾವಿರ ಕಬ್ಬು ಬೆಳೆಗಾರರ ೧೦ ಲಕ್ಷ ಟನ್ ಕಬ್ಬಿನ ೧೧.೨೦ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಚಿಣಮಗೇರಾದ ಕೆಪಿಆರ್ ಪ್ರತಿ ಟನ್ ಕಬ್ಬಿಗೆ ೧೧೬ ರೂ.ನಂತೆ ೨೫ ಸಾವಿರ ರೈತರ ೧೧ ಲಕ್ಷ ಟನ್ ಕಬ್ಬಿನ ೧೭.೮೨ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದ್ದು, ವ್ಯತ್ಯಾಸದ ಶುಲ್ಕ ಮರು ಪಾವತಿ ಸೇರಿ ಹಲವು ವಿಷಯ ಕುರಿತು ಸಕ್ಕರೆ ಕಾರ್ಖಾನೆಗಳು ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಕೂಡಲೇ ಮುತುವರ್ಜಿ ವಹಿಸಿ ರೈತರ ಬಾಕಿ ಹಣ ಬಿಡುಗಡೆಗೆ ಕ್ರಮವಹಿಸಬೇಕು ಎಂದರು.
ಬಾಕಿ ಬಿಡುಗಡೆಗೆ ಆಗ್ರಹಿಸಿ ಆ.೮ರಂದು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮ ದಣ್ಣೂರ, ಶ್ರೀಮಂತ ಬಿರಾದಾರ, ಅಶೋಕ ಹೂಗಾರ, ಜಾವೇದ ಮಿಯಾ, ಶರಣು ಕೆ. ಇತರರಿದ್ದರು.
ಕಬ್ಬಿನ ಬಾಕಿ ಹಣ ಬಿಡುಗಡೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ದಿವ್ಯ ಮೌನ ವಹಿಸಿದ್ದಾರೆ. ಅವರ ಗಮನಕ್ಕೆ ತಂದರೂ ಇಂದು ಬೇಡ ನಾಳೆ ಬಾ ಎನ್ನುವಂತೆ ದಿನದೂಡುತ್ತಿದ್ದಾರೆ. ರೈತರ ಹಣ ರೈತರಿಗೆ ಕೊಡಿಸಲು ಆಗದಿರುವುದು ದುರಂತ.| ಶರಣಬಸಪ್ಪ ಮಮಶೆಟ್ಟಿಜಿಲ್ಲಾಧ್ಯಕ್ಷ, ಪ್ರಾಂತ ರೈತ ಸಂಘ