ಕಬ್ಬಿನ ನಷ್ಟ ಕಟ್ಟಿಕೊಡುವಂತೆ ಆಗ್ರಹ

Published on

ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಧರಣಿ ಆರಂಭಿಸಿದೆ.
ತಾಲೂಕಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿ ಮಂಡಳಿಯು ರೈತರು ಬೆಳೆದ ಕಬ್ಬನ್ನು 12 ರಿಂದ 14 ತಿಂಗಳ ಒಳಗೆ ಕಟಾವು ಮಾಡಬೇಕಿತ್ತು. ಆದರೆ 19 ರಿಂದ 20 ತಿಂಗಳಾದರೂ ಕೆಲವು ಕಡೆ ಕಬ್ಬು ಕಟಾವು ಮಾಡಿಲ್ಲ. ಈ ನಡುವೆ ವೇತನ ಪರಿಷ್ಕರಣೆ ವಿಚಾರವಾಗಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರು ಹಾಗೂ ಆಡಳಿತ ಮಂಡಳಿ ನಡುವೆ ವಿವಾದ ಸೃಷ್ಟಿಯಾಗಿತ್ತು. ಕಾರ್ಮಿಕರು ಕಾರ್ಖಾನೆ ಬಂದ್ ಮಾಡಿ ಹೋರಾಟ ಕೈಗೊಂಡಿದ್ದರು. ಈ ವೇಳೆ ಅದಾಗಲೇ ಕಾರ್ಮಿಕರಿಂದ ಕಟಾವು ಮಾಡಿಸಿದ್ದ ಸುಮಾರು 12 ರಿಂದ 15 ಟನ್ ಕಬ್ಬು ಒಣಗಿದೆ. ಆದ್ದರಿಂದ ರೈತರಿಗೆ ಆಗಿರುವ ನಷ್ಟ ಭರಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.
ರೈತ ಮುಖಂಡ ನಂಜುಂಡಸ್ವಾಮಿ ಕುಂತೂರು ಮಾತನಾಡಿ, ವೇತನ ವಿಚಾರವಾಗಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರು ಮಾ.2ರಿಂದ ಮುಷ್ಕರ ಹೂಡಿದ್ದರು. ಮಾ.10ರಿಂದ ಕಾರ್ಖಾನೆ ಕೆಲಸದಿಂದ ದೂರ ಉಳಿದು ಪ್ರತಿಭಟನೆ ಪ್ರಾರಂಭಿಸಿದ್ದರು. ಈ ವೇಳೆ 12 ರಿಂದ 15 ಟನ್ ಕಬ್ಬು ಒಣಗಿದೆ. ಇದರಿಂದ ರೈತರು ನಷ್ಟ ಅನುಭವಿಸಿದ್ದು, ಇದನ್ನು ಭರಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಚುನಾವಣೆ ಹಿನ್ನೆಲೆ ತಲೆಕೆಡಿಸಿಕೊಳ್ಳುತ್ತಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹಾಗೂ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಿನನಕಹಳ್ಳಿ ಲೋಕೇಶ್, ಶಿವಸ್ವಾಮಿ ಕಮರವಾಡಿ, ತೇಜಸ್ ಸಿಲ್ಕಲ್ ಪುರ, ವಸಂತ ರಾಜ್ ಕುಂತೂರು, ಚಂದ್ರಶೇಖರ್ ಕಿನಕಹಳ್ಳಿ, ಮಹದೇವ ಪ್ರಸಾದ್, ನಂಜುಂಡಸ್ವಾಮಿ ಶಂಕನಪುರ, ಬೂದಿತಿಟ್ಟು ಸುರೇಶ್, ಶಿವಕುಮಾರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net