

ಮದ್ದೂರು: ಕಾಡಾನೆಗಳು ನಾಡಿನತ್ತ ನುಗ್ಗುತ್ತಿದ್ದು ಬುಧವಾರ ಬೆಳ್ಳಂಬೆಳಗ್ಗೆ ತಾಲೂಕಿನ ಅಜ್ಜಹಳ್ಳಿ, ತೊರೆಚಾಕನಹಳ್ಳಿಯ ಶಿಂಷಾ ನದಿ ಬಳಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ.
ಅಜ್ಜಹಳ್ಳಿ, ತೊರೆಚಾಕನಹಳ್ಳಿಯ ಶಿಂಷಾ ನದಿ ದಡದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಚನ್ನಪಟ್ಟಣ ತಾಲೂಕಿನ ಕಬ್ಬಾಳು ಬಳಿ ನರಿಕಲ್ ಗುಡ್ಡದ ಸಮೀಪದ ಕಾಗಲ್ ಕೆರೆಯಲ್ಲಿ ಮಂಗಳವಾರ ಸಂಜೆ ಆನೆಗಳು ಬೀಡು ಬಿಟ್ಟಿದ್ದವು. ಅಲ್ಲಿಂದ ಸುಮಾರು 5 ಆನೆಗಳನ್ನು ಅರಣ್ಯಾಧಿಕಾರಿಗಳು ಕಾಡಿಗಟ್ಟುವ ವೇಳೆ ರಾತ್ರಿ ಮದ್ದೂರು ತಾಲೂಕು ಕಡೆಗೆ ಹೆಜ್ಜೆ ಹಾಕಿ ಶಿಂಷಾ ನದಿಗೆ ಆಗಮಿಸಿವೆ. ಬುಧವಾರ ಬೆಳಗ್ಗೆ ಗ್ರಾಮದ ರೈತರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ಆನೆಗಳ ಹಿಂಡು ಕಾಣಿಸಿಕೊಂಡಿವೆ. ಜನರ ಕೂಗಾಟ, ಚೀರಾಟಕ್ಕೆ ಬೆದರಿದ ಆನೆಗಳು ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಆನೆಗಳನ್ನು ಓಡಿಸಲು ದೌಡಾಯಿಸಿದ್ದಾರೆ. ಕಬ್ಬಿನ ಗದೆಯಲ್ಲಿ ಬೀಡುಬಿಟ್ಟ ಆನೆಗಳು ಕಬ್ಬು ನಾಶ ಪಡಿಸುತ್ತಿದ್ದು, ರೈತರ ನಿದ್ದೆಗೆಡಿಸಿವೆ. ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.