ಕಬ್ಬಿನ ಕೊರತೆ ನೀಗಿಸಲು ರೈತರು ಮುಂದಾಗಲಿ

15.kkr1(7-23
ಕಿಕ್ಕೇರಿ ಸಮೀಪದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಬ್ಬು ನುರಿಯುವಿಕೆಗೆ ಶನಿವಾರ ಕಾರ್ಖಾನೆ ಹಿರಿಯ ವ್ಯವಸ್ಥಾಪಕ ವಿ.ಜೆ. ರವಿ ಚಾಲನೆ ನೀಡಿದರು. ಕಾರ್ಖಾನೆ ಅಧಿಕಾರಿ ಕೆ. ಬಾಬುರಾಜ್, ವಕೀಲ ರವಿಶಂಕರ್, ಕುಮಾರ್, ಕಾಯಿ ಮಂಜೇಗೌಡ, ಮಂಜುನಾಥ್, ರಾಮೇಗೌಡ, ಕಾರ್ಖಾನೆಯ ಅಧಿಕಾರಿಗಳಾದ ದತ್ತಾತ್ರೇಯ, ಮೇಯನ್ ಹಾಜರಿದ್ದರು.
Published on

ಕಿಕ್ಕೇರಿ: ಪ್ರಸಕ್ತವಾಗಿ ಕಬ್ಬಿನ ಕೊರತೆ ಕಾಡುತ್ತಿದ್ದು ರೈತರು ಹೆಚ್ಚು ಸುಧಾರಿತ ಕಬ್ಬಿನ ತಳಿ ಬೆಳೆಯಲು ಮುಂದಾಗಬೇಕು ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ವ್ಯವಸ್ಥಾಪಕ ವಿ.ಜೆ. ರವಿ ಹೇಳಿದರು.

ಸಮೀಪದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಕಾರ್ಖಾನೆ ಆರ್ಥಿಕ ಚೈತನ್ಯಕ್ಕೆ ಎಥನಾಲ್ ಘಟಕ ಅವಶ್ಯವಿದ್ದು ಎಲ್ಲರ ಸಹಕಾರ ಬೇಕಿದೆ. ನಿತ್ಯ 4 ಸಾವಿರ ಟನ್ ನುರಿಯುವ ಸಾಮರ್ಥ್ಯ ಕಾರ್ಖಾನೆಗಿದೆ. ಪ್ರಸಕ್ತ ಸಾಲಿನಲ್ಲಿ ಕನಿಷ್ಠ 8.5 ಲಕ್ಷ ಟನ್ ಕಬ್ಬು ನುರಿಯುವ ಗುರಿ ಇದೆ. ತಾಲೂಕಿನ 16.5 ಸಾವಿರ ಎಕರೆ ಭೂಮಿಯಲ್ಲಿ ಕಬ್ಬು ಕೇವಲ 6.5 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ. 13 ಸಾವಿರ ರೈತರು 14.5 ಸಾವಿರ ಎಕರೆಯಲ್ಲಿ ಕಬ್ಬು ಬೆಳೆಗೆ ಒಪ್ಪಿಗೆ ಪಡೆಯಲಾಗಿದೆ. 1.5ಲಕ್ಷ ಟನ್ ಕಬ್ಬಿನ ಕೊರತೆ ಕಾಡುತ್ತಿದೆ ಎಂದರು.

ಸಕಾಲದಲ್ಲಿ ಎಲ್ಲ ರೈತರಿಗೆ ಎರಡು ಕಂತಿನಲ್ಲಿ ಪ್ರತಿ ಟನ್‌ಗೆ 2,821ರೂ. ಹಣ ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ ಹಣ ನೀಡಲು ಕಾರ್ಖಾನೆ ಬದ್ಧವಿದೆ. ಅಕ್ಟೋಬರ್ ಮಾಹೆವರೆಗೆ 6 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಬಡ್ಡಿರಹಿತ ಸಾಲ ನೀಡಲಾಗುವುದು. ನವೆಂಬರ್‌ನಿಂದ 2024ರ ಮೇ ಮಾಹೆವರೆಗೆ ಉಚಿತವಾಗಿ 2.5 ಸಾವಿರ ಎಕರೆ ಪ್ರದೇಶಕ್ಕೆ ಕಬ್ಬಿನ ಬೀಜ ವ್ಯವಸ್ಥೆ ಮಾಡಲಾಗುವುದು. ಬಿತ್ತನೆ ಬೀಜ ಅಭಿವೃದ್ಧಿ ಕಾರ್ಯಕ್ರಮದಡಿ 500 ಎಕರೆಗೆ ಶೇ. 50 ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುವುದು. ಸೂಕ್ತ ಪೋಷಕಾಂಶ ಸಮಸ್ಯೆ ಪರಿಹಾರಕ್ಕಾಗಿ 3 ಸಾವಿರ ಎಕರೆಗೆ ಶೇ.25ರಷ್ಟು ರಿಯಾಯಿತಿಯಲ್ಲಿ 30 ಟನ್ ಸೂಕ್ಷ್ಮ ಪೋಷಕಾಂಶ ಮಿಶ್ರಣ ಪೂರೈಕೆ ಮಾಡಲಿದ್ದು ಕಬ್ಬು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ. ಬಾಬುರಾಜ್ ಮಾತನಾಡಿ, ಕಬ್ಬು ಕಟಾವಿಗಾಗಿ 6.5 ಕೋಟಿ ರೂ. ಮುಂಗಡ ಹಣ ನೀಡಿ ಹೊರ ಜಿಲ್ಲೆಯಿಂದ 260 ತಂಡ, ಸ್ಥಳೀಯವಾಗಿ 70 ತಂಡಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಟನ್ ಕಬ್ಬು ಕಟಾವಿಗೆ 400ರೂ. ನಿಗದಿಪಡಿಸಲಾಗಿದೆ. ಸ್ಥಳೀಯರು ಕಬ್ಬು ಕಟಾವು ಮಾಡಲು ಮುಂದಾದರೆ ಸ್ಥಳೀಯ ರೈತರು ಆರ್ಥಿಕ ಪ್ರಗತಿ ಸಾಧಿಸಬಹುದಾಗಿದೆ ಎಂದು ನುಡಿದರು.

ಇದಕ್ಕೂ ಮುನ್ನ ಗಣಪತಿ, ದುರ್ಗಾ ಮತ್ತಿತರ ಹೋಮ ನೆರವೇರಿಸಲಾಯಿತು. ಕಾನೂನು ಸಲಹೆಗಾರ ರವಿಶಂಕರ್, ಕಾರ್ಖಾನೆಯ ಅಧಿಕಾರಿಗಳಾದ ಪಿ.ಎಸ್. ಮೇಯನ್, ಅಶೋಕ್‌ಕುಮಾರ್, ಕೆ.ಜಿ. ಮೋಹನ್, ಆರ್.ಇ. ಕುಮಾರ್, ಸೂರ್ಯನಾರಾಯಣರೆಡ್ಡಿ, ವೀರೇಶ್, ಮಾಕವಳ್ಳಿ ಗ್ರಾಪಂ. ಅಧ್ಯಕ್ಷ ಮಹದೇವೇಗೌಡ, ಚೌಡೇನಹಳ್ಳಿ ಗ್ರಾಪಂ ಅಧ್ಯಕ್ಷ ಲಕ್ಷ್ಮಿರಾಜ್, ಸದಸ್ಯೆ ವೀಣಾ, ಕಬ್ಬು ಬೆಳೆಗಾರ ಸಂಘದ ಕುಮಾರ್, ಕಾಯಿ ಮಂಜೇಗೌಡ, ವಡಕಹಳ್ಳಿ ಮಂಜುನಾಥ್, ಮುಖಂಡರಾದ ರಾಮೇಗೌಡ, ಬಲರಾಮೇಗೌಡ, ಅಶೋಕ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net