ಕಬ್ಬಿನ ಎಫ್‌ಆರ್‌ಪಿ ದರ ಪುನರ್ ಪರಿಶೀಲಿಸಲು ಒತ್ತಾಯ

08rajesh4
Published on

ಚಾಮರಾಜನಗರ: ಕಬ್ಬಿನ ಎಫ್‌ಆರ್‌ಪಿ ದರವನ್ನು ಪುನರ್ ಪರಿಶೀಲಿಸಬೇಕೆಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮನವಿ ಸಲ್ಲಿಸಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಒಂದು ಟನ್ ಕಬ್ಬಿನ 10.25 ಇಳುವರಿಗೆ ಕೇಂದ್ರ ಸರ್ಕಾರ 2025-26 ನೇ ಸಾಲಿಗೆ 3550 ರೂ, ನಿಗದಿ ಮಾಡಿದ್ದು, ಇದು ಅವೈಜ್ಞಾನಿಕವಾಗಿದೆ. ಕೇವಲ ಪ್ರತಿಟನ್‌ಗೆ 150 ರೂ, ಮಾತ್ರ ಹೆಚ್ಚುವರಿ ಮಾಡಿದ್ದು, ಉತ್ಪಾದನಾ ವೆಚ್ಚ ಹಾಗೂ ಕಟಾವು, ಸಾಗಾಣಿಕೆ, ರಸಗೊಬ್ಬರ, ಕೂಲಿ ಕಾರ್ಮಿಕರ ವೆಚ್ಚ ಎಲ್ಲವೂ ಹೆಚ್ಚಳವಾಗಿದೆ. ಪ್ರತಿ ಟನ್ ಕಬ್ಬಿಗೆ 150 ರೂ, ನಂತೆ ಒಂದು ಕೆ.ಜಿ ಕಬ್ಬಿಗೆ ಕೇವಲ 15 ಪೈಸೆ ಮಾತ್ರ ಜಾಸ್ತಿ ಮಾಡಿ, ರೈತರಿಗೆ ಕೇಂದ್ರ ಸರ್ಕಾರ ಬೆಲೆ ನಿಗದಿಯಲ್ಲಿ ಸಿಎಸಿಪಿ ವರದಿಯಂತೆ 4,500 ರೂ, ನಿಗದಿ ಮಾಡಬೇಕಾಗಿತ್ತು. ಆದರೆ ಬಂಡವಾಳ ಶಾಹಿಗಳು ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಕೇವಲ ಪ್ರತಿ ಟನ್ ಕಬ್ಬಿಗೆ 150 ರೂ, ಮಾತ್ರ ಹೆಚ್ಚುವರಿ ಮಾಡಿದ್ದು ಇದನ್ನು ತಕ್ಷಣ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ಚುನಾಯಿತ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಫ್‌ಆರ್‌ಪಿ ದರವನ್ನು ಪುನರ್ ಪರಿಶೀಲನೆಗೆ ಆಗ್ರಹಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಂದೆ ಎಪಿಎಂಸಿ ಹಾಗೂ ಸಹಕಾರ ಇಲಾಖೆಯ ಮೂಲಕ ತೂಕದ ಯಂತ್ರಗಳನ್ನು ಅಳವಡಿಸಬೇಕು. ತೂಕವಾದ ತಕ್ಷಣ ರೈತರಿಗೆ ಡಿಜಿಟಲ್ ಎಸ್‌ಎಂಎಸ್ ಸಂದಾಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷಿಯ ಒಪ್ಪಂದ ಪತ್ರ ಜಾರಿಯಾಗಬೇಕು. ಇಳುವರಿಯಲ್ಲಿನ ಮೋಸವನ್ನು ತಪ್ಪಿಸಲು ಸ್ಥಳೀಯ ರೈತ ಮುಖಂಡರು ಹಾಗೂ ತಜ್ಞರ ಸಮಿತಿಯನ್ನು ರಚಿಸಬೇಕು. ಸಕ್ಕರೆ ಕಾರ್ಖಾನೆಗಳ ಆದಾಯ ಪತ್ರವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಶೀಲಿಸಿ, ಹೆಚ್ಚುವರಿ ಲಾಭವನ್ನು ರೈತರಿಗೆ ಹಂಚಲು ಕ್ರಮ ಕೈಗೊಳ್ಳಬೇಕು. ಕಟಾವು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ತಕ್ಷಣ ಕಬ್ಬು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು. ಕಳೆದ ಸಾಲಿನ 950 ಕೋಟಿ ರೂ, ಬಾಕಿಯನ್ನು ರೈತರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಮುಖಂಡರಾದ ಪ್ರಕಾಶ್ ಗಾಂಧಿ, ಗುರುವಿನಪುರ ಚಂದ್ರು, ಆನಂದ ಹೂನಹಳ್ಳಿ, ಬಸವಣ್ಣ, ಬಸವರಾಜು ಪಿ.ಮರಹಳ್ಳಿ, ಶಿವಣ್ಣ, ರಾಮಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net