

ಕಿಕ್ಕೇರಿ: ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ಸಮೀಪ ಕಟಾವಿಗೆ ಬಂದಿದ್ದ ಕಬ್ಬಿಗೆ ಭಾನುವಾರ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಲಕ್ಷ್ಮೀಪುರ ಗ್ರಾಮದ ವಾಸಿ, ರೈತ ಮಹಿಳೆ ರಾಜಮ್ಮ ಅವರು ಗೋವಿಂದನಹಳ್ಳಿ ಸಮೀಪವಿರುವ ಸರ್ವೇ ನಂ.9/3ರ 1.5 ಎಕರೆ ಜಮೀನಿನಲ್ಲಿ ಸಾಕಷ್ಟು ಸಾಲ ಮಾಡಿ ಕಬ್ಬು ಬೆಳೆದಿದ್ದರು. ಭಾನುವಾರ ಮಧ್ಯಾಹ್ನ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಕಿಡಿ ಹಾರಿ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದೆ. ಜಮೀನಿನ ಅಕ್ಕಪಕ್ಕದವರು ಬೆಂಕಿ ನಂದಿಸಲು ಶತಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಜಮೀನಿನಲ್ಲಿದ್ದ ಸುಮಾರು 40 ತೆಂಗಿನ ಮರಗಳಿಗೂ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿ ಎನ್.ಆರ್. ಚಂದ್ರಶೇಖರ್, ಸೋಮಶೇಖರಗೌಡ, ಪ್ರದೀಪ್, ರಮೇಶ್, ಸಚಿನ್ ಎಂ. ಕರದಿನ್ ಭಾಗವಹಿಸಿದ್ದರು.