

ಬೆಳಗಾವಿ: ಟನ್ ಕಬ್ಬಿಗೆ ಕಾರ್ಖಾನೆಗಳಿಂದ 3,500 ರೂ. ಹಾಗೂ ಸರ್ಕಾರದಿಂದ 2000 ರೂ. ಬೆಂಬಲ ಬೆಲೆ ಸೇರಿ ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು.
ಸರ್ಕಾರಕ್ಕೆ ಪ್ರತಿ ಟನ್ ಕಬ್ಬಿಗೆ 4,500 ರೂ. ತೆರಿಗೆ ಹೋಗುತ್ತದೆ. ಸರ್ಕಾರಕ್ಕೆ ಹೋಗುವ 4,500 ರೂ. ತೆರಿಗೆ ಹಣದಲ್ಲಿ ರೈತರಿಗೆ ಸರ್ಕಾರ 2,000 ರೂ. ಬೆಂಬಲ ಬೆಲೆ ಘೋಷಿಸಿ, ಒಟ್ಟಾರೆ ಟನ್ ಕಬ್ಬಿಗೆ 5,500 ರೂ. ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಘೋಷಿಸಿರುವ ಎಫ್.ಆರ್.ಪಿ.ಯಿಂದ ರೈತರಿಗೆ ಮೋಸವಾಗಿದೆ. 27 ಸಾವಿರ ಕೋಟಿ ರೂ.ಗಳಿಗೂ ಅಧಿಕ ಕಬ್ಬಿನ ಇತರ ಉತ್ಪನ್ನಗಳಿಂದ ತೆರಿಗೆ ಪಡೆಯುವ ಸರ್ಕಾರ ಕಬ್ಬು ಬೆಳೆಯುವ ರೈತರಿಗೆ ಎಫ್‌ಆರ್‌ಪಿಯಲ್ಲಿ ಮೋಸ ಮಾಡುತ್ತಿದೆ. ಕಬ್ಬಿನ ಇತರ ಉತ್ಪನ್ನಗಳಿಂದ ಪಡೆಯುವ ತೆರಿಗೆಯಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಚೂನಪ್ಪ ಪೂಜಾರಿ, ಗಣಪತಿ ಈಳಗೇರ, ರಾಘವೇಂದ ನಾಯಕ, ರಾಜು ಪವಾರ, ಶಿವಾನಂದ ಮುಗಳಿಗಾಳ, ಕಿಶೋರ ಮಿಟಾರಿ, ರವಿ ಸಿದ್ದಮ್ಮನವರ, ಪಾಂಡು ಬಿರನಗಡ್ಡಿ, ರಾಮಪ್ಪ ಮಾದಣ್ಣವರ ಇತರರು ಧರಣಿಯಲ್ಲಿದ್ದರು.