

ಚಾಮರಾಜನಗರ: ಕಬ್ಬು ತಿನ್ನಲು ರಸ್ತೆಗಿಳಿದ ಕಾಡಾನೆಯೊಂದು ಎದುರಿಗೆ ಬಂದ ಲಾರಿ ಹತ್ತಲು ಮುಂದಾಗಿ, ಲಾರಿಯ ಗಾಜನ್ನು ಹೊಡೆದುಹಾಕಿದೆ.
ತಾಲೂಕಿನ ಆಸನೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಕಾಡಾನೆಯೊಂದು ಲಾರಿಯನ್ನು ತಡೆದು ಅದರ ಮುಂಭಾಗದ ಮೇಲೆ ಕಾಲಿಟ್ಟು ಕಬ್ಬು ಕಿತ್ತಿದೆ. ಆನೆ ಕಾಲಿಟ್ಟಿದ್ದೇ ತಡ ಲಾರಿಯ ಗಾಜು ಪುಡಿ ಪುಡಿಯಾಗಿದೆ. ಆನೆ ಕೊನೆಗೂ ಒಂದು ಕಂತೆ ಕಬ್ಬನ್ನು ಎಳೆದೊಯ್ದಿದೆ. ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿ ನಿರಂತರವಾಗಿ ಕಾಡಾನೆ ಓಡಾಡುತ್ತಿದ್ದು, ಕಬ್ಬಿನ ಲಾರಿಗಳನ್ನು ಅಡ್ಡಗಟ್ಟುವುದು ಸಾಮಾನ್ಯವಾಗಿದೆ. ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಾಡಾನೆಗಳು ದಾಳಿ ಮಾಡುತ್ತಿದ್ದು, ಚಾಲಕರು ಹೈರಾಣಾಗಿದ್ದಾರೆ.