

ಹಾಸನ: ತಾಲೂಕಿನ ದುದ್ದ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಶುಕ್ರವಾರ ಗ್ರಾಮೀಣ ಕೃಷಿ ಶಿಬಿರದ ಅಂಗವಾಗಿ ರೈತರಿಗೆ ಹಸಿರೆಲೆ ಗೊಬ್ಬರಗಳನ್ನು ಬಳಸುವುದರಿಂದ ಬೆಳೆಗಳ ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ಮಣ್ಣಿನ ಆರೋಗ್ಯ ಸುಧಾರಿಸುವ ಬಗ್ಗೆ ಮಾಹಿತಿ ನೀಡಿದರು.
ರಾಸಾಯನಿಕ ಗೊಬ್ಬರ ಮತ್ತು ಕಳೆನಾಶಕಗಳ ಬಳಕೆಯಿಂದ ಕಡಿಮೆಯಾಗುತ್ತಿರುವ ಮಣ್ಣಿನ ಫಲವತ್ತತೆಯನ್ನು ಸಾವಯವ ಗೊಬ್ಬರಗಳ ಉಪಯೋಗದ ಮೂಲಕ ರೈತರು ಕಾಪಾಡಿಕೊಳ್ಳಬಹುದಾಗಿದೆ. ಹಸಿರೆಲೆ ಗೊಬ್ಬರವು ಈ ಸಾವಯವ ಗೊಬ್ಬರಗಳಲ್ಲಿ ಒಂದು ವಿಧವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೃಷಿ ಮಹಾವಿದ್ಯಾಲಯ ಬೇಸಾಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಪ್ರಮೋದ್‌ಮಾತನಾಡಿ, ಹಸಿರೆಲೆ ಗೊಬ್ಬರ ಪದ್ಧತಿಯು ಯಾವುದೇ ರೀತಿಯಲ್ಲೂ ಬೆಳೆ ಹಾನಿ ಮಾಡುವುದಿಲ್ಲ, ಬದಲಿಗೆ ಬದುಗಳ ಮೇಲಿರುವ ಮರಗಳು ಬೇಲಿಯಂತೆ ವರ್ತಿಸುತ್ತವೆ ಮತ್ತು ಮಣ್ಣಿಗೆ ಲಘು ಪೋಷಕಾಂಶಗಳನ್ನು ಸೇರಿಸುತ್ತವೆ. ವಾತಾವರಣದಲ್ಲಿರುವ ಸಾರಜನಕವನ್ನು ಗಿಡಗಳಿಗೆ ಸಿಗುವ ರೂಪಕ್ಕೆ ಪರಿವರ್ತಿಸುತ್ತವೆ. ಸೂಕ್ತವಾದ ಬೆಳೆಗಳೆಂದರೆ ತಡನಿ ಕಾಳು,ಅಲಸಂದೆ ಅಪ್ಸೆಣಬು, ಬೇವು ಮತ್ತು ಮುಂತಾದವು ಎಂದು ತಿಳಿಸಿದರು.
ರೈತರು ಗಮನಿಸಬೇಕಾದ ಅಂಶಗಳೆಂದರೆ ಶೀಘ್ರವಾಗಿ ಮತ್ತು ಸುಲಭವಾಗಿ ಕೊಳೆಯುವ, ಕಡಿಮೆ ಪೋಷಕಾಂಶಗಳನ್ನು ಬಳಸಿಕೊಳ್ಳುವ ಗಿಡಗಳಾಗಿರಬೇಕು. ಎರಡು ವಿಧಾನಗಳಲ್ಲಿ ಈ ಗೊಬ್ಬರವನ್ನು ಬಳಸಬಹುದಾಗಿದ್ದು, ಮೊದಲನೆಯದಾಗಿ ಮುಖ್ಯ ಬೆಳೆಗೂ ಮುಂಚಿತವಾಗಿ ಅಥವಾ ಕಟಾವಿನ ನಂತರದಲ್ಲಿ ಹಸಿರೆಲೆ ಬೆಳೆಯ ಬೀಜಗಳನ್ನು ಬಿತ್ತನೆ ಮಾಡಿ ಹೂವು ಬಿಡುವ ಸಮಯದಲ್ಲಿ ಉಳುಮೆಯ ಮೂಲಕ ಮಣ್ಣಿಗೆ ಸೇರಿಸುವುದು. ಸ್ಥಳದಲ್ಲಿಯೇ ಹಸಿರು ಗೊಬ್ಬರ ಒದಗಿಸುವ ಈ ವಿಧಾನಕ್ಕೆ ದ್ವಿದಳ ಧಾನ್ಯಗಳು,ಡಯಾಂಚ,ಅಗಸೆ ಅಥವಾ ಸೆಣಬನ್ನು ಬಳಸಬಹುದಾಗಿದೆ.ಎರಡನೇ ವಿಧಾನದಲ್ಲಿ ಗೋಮಳ,ಬದುಗಳ ಮೇಲೆ ಬೆಳೆದ ಹಸಿರೆಲೆ ಗಿಡಗಳನ್ನು ಮೃದುವಾದ ಕಾಂಡ ಸಮೇತ ತಂದು ಕೃಷಿ ಜಮೀನಿಗೆ ಸೇರಿಸುವುದು.ಈ ವಿಧಾನದಲ್ಲಿ ಹೊಂಗೆ, ಗ್ಲಿರಿಸಿಡಿಯಾ, ಸುಬಾಬಲ್ ಅಥವಾ ಬೇವಿನ ಎಲೆಗಳನ್ನು ಬಳಸಬಹುದಾಗಿದೆ ಎಂದು ರೈತರಿಗೆ ಮಾಃಇತಿ ನೀಡಿದ್ದರು.