

ಹಾಸನ: ನಗರದ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ದುದ್ದ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2024-25ರ ಅಂಗವಾಗಿ ಶುಕ್ರವಾರ ಪಾರ್ಥೇನಿಯಂ ಕಳೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ನೆಡೆಸಿದರು.
ಪಾರ್ಥೇನಿಯಂ ಸಸ್ಯ ಒಂದು ವಿನಾಶಕಾರಿ ಕಳೆಯಾಗಿದೆ. ಇದರಲ್ಲಿನ ಪಾರ್ಥಿನ್ ಎಂಬ ಲ್ಯಾಕ್ಟೋನ್ ಅಂಶ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿದ್ದು, ಚರ್ಮದ ಅಲರ್ಜಿ ಉಂಟು ಮಾಡುತ್ತದೆ. ಕಳೆ ಹೆಚ್ಚು ಪ್ರಮಾಣದಲ್ಲಿ ಪರಾಗ ಉತ್ಪಾದಿಸುವುದರಿಂದ ವಾತಾವರಣದಲ್ಲಿ ಸೇರಿ ಉಸಿರಾಟದ ತೊಂದರೆ ಉಂಟಾಗುತ್ತದೆ. ರೈತರಿಗೆ ಕಡಿಮೆ ಬೆಳೆ ಉತ್ಪಾದನೆ, ಬೆಳೆಯ ಗುಣಮಟ್ಟ, ಮಣ್ಣಿನ ಗುಣಮಟ್ಟಕ್ಕೆ ಹಾನಿ ಮಾಡುವುದರಿಂದ ಕಳೆಯ ಸಮಗ್ರ ನಿರ್ವಹಣೆ ಮತ್ತು ಅದರ ಸಂಪೂರ್ಣ ವಿನಾಶ ಮಾಡುವುದು ಅಗತ್ಯವಾಗಿದೆ ಎಂದು ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಕಳೆ ನಾಶಕಗಳಾದ ಪ್ಯಾರಾಕ್ವಾಟ್ 500 ರಿಂದ 600 ಗ್ರಾಂ ಪ್ರತಿ ಎಕರೆಗೆ ಅಥವಾ ಗ್ಲೈಪೋಸೇಟ್ 10 ಮಿ.ಲೀ ಪ್ರತಿ ಲೀಟರ್ ನೀರಿಗೆ (ನೀರಿನ ಪ್ರಮಾಣ 300 ಲೀಟರ್ ಪ್ರತಿ ಎಕರೆಗೆ)ಬೆರೆಸಿ ನೇರವಾಗಿ ಸಿಂಪಡಿಸುವುದರಿಂದ 4 ರಿಂದ 5 ದಿನಗಳಲ್ಲಿ ಪಾರ್ಥೇನಿಯಂ ಸಸ್ಯ ಒಣಗಿ ಸಾಯುತ್ತದೆ. ಈ ಕಳೆ ಪ್ರಥಮ ಹಂತದಲ್ಲಿರುವಾಗ ಕೈಯಿಂದ ಕಿತ್ತು ನಾಶಪಡಿಸಬಹುದು ಅಥವಾ ಕಾಂಪೋಸ್ಟ್ ತಯಾರಿಕೆಗೂ ಬಳಸಬಹುದು ಎಂದು ವಿದ್ಯಾರ್ಥಿಗಳು ತಿಳಿಸಿದರು.