ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಜಾತ್ರೆಗೆ ತೆರೆ

ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಜಾತ್ರೆಗೆ ತೆರೆ
Published on


ಚನ್ನರಾಯಪಟ್ಟಣ: ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಳೆದ 5 ದಿನಗಳಿಂದ ನಡೆದ 91 ನೇ ಬೃಹತ್ ದನಗಳ ಜಾತ್ರಾ ಮಹೋತ್ಸವವು ಬುಧವಾರ ಸಂಜೆ ಧರ್ಮಧ್ವಜ ಅವರೋಹಣದೊಂದಿಗೆ ಸಂಪನ್ನಗೊಂಡಿತು.


ಶ್ರೀ ಆದಿಚಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ನ.5 ರಂದು ಧರ್ಮ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು ನ.9 ರವರಗೆ 5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.


ಶ್ರೀಕ್ಷೇತ್ರದ ವಾಡಿಕೆ ಹಾಗೂ ಸಂಪ್ರದಾಯದಂತೆ 5 ದಿನಗಳ ಕಾಲ ಜಾತ್ರಾ ಮಹೋತ್ಸವವು ಜರುಗಿದ್ದು ಶ್ರೀ ಬಸವೇಶ್ವರಸ್ವಾಮಿಗೆ ದಿನನಿತ್ಯ ಪಂಚಾಮೃತಾಭಿಷೇಕ, ಅಲಂಕಾರ, ಉತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.


ಶ್ರೀ ಬಸವೇಶ್ವರಸ್ವಾಮಿ ಉತ್ಸವ, ಶ್ರೀ ಚೌಡೇಶ್ವರಿದೇವಿ ಉತ್ಸವ, ಸರ್ಪವಾಹನೋತ್ಸವ, ಚುಂಚಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಜರುಗಿದ್ದು ಸುತ್ತಮುತ್ತಲ ಗ್ರಾಮಸ್ಥರು ಜಾನುವಾರುಗಳನ್ನು ಕರೆತಂದು ಪ್ರದಕ್ಷಣೆ ಹಾಕಿದರು.


ಸಂಪ್ರದಾಯದಂತೆ ಜಾತ್ರಾ ಮಹೋತ್ಸವವನ್ನು ಮುಕ್ತಾಯಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ಜಾತ್ರಾ ಮಹೋತ್ಸವದ ಅಂತಿಮ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.


ಮೊದಲಿಗೆ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ, ಬಿಲ್ವಪತ್ರೆ ಮರ ಹಾಗೂ ನಾಗರ ದೇವತೆಗಳಿಗೆ ಪುಷ್ವಾರ್ಚನೆ, ದೇಗುಲದ ಹಿಂಭಾಗದಲ್ಲಿರುವ ಬಸವ ಮೂರ್ತಿಗೆ ಕ್ಷೀರಾಭಿಷೇಕ, ನಂತರ ಶ್ರೀ ಬಸವೇಶ್ವರಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಕಲ್ಯಾಣಿಯ ದೇವರ ಮೂಲೆಯಲ್ಲಿ ಗಂಗಾ ಪೂಜೆಯೊಂದಿಗೆ ದೇಗುಲದ ಎದುರಿನ ಗರುಡ ಕಂಬದ ಮೇಲಿರುವ ದೀಪವನ್ನು ಬೆಳಗಿಸಲಾಯಿತು, ಬಳಿಕ ಧರ್ಮಧ್ವಜ ಅವರೋಹಣ ಮಾಡಲಾಯಿತು.


ಶ್ರೀಕ್ಷೇತ್ರದಿಂದ ಕಬ್ಬಳಿ ಗ್ರಾಮಕ್ಕೆ ಕರೆದೊಯ್ದ ಶ್ರೀ ಬಸವೇಶ್ವರಸ್ವಾಮಿ ಮೂರ್ತಿಯನ್ನು ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆ ಮಾಡಕಾಯಿತು. ಬಳಿಕ ಉತ್ಸವ ಮೂರ್ತಿಯ ದೇಗುಲದ ಬಳಿ ಉತ್ಸವವು ಕೊನೆಗೊಂಡಿತು, .ಸಾವಿರಾರು ಭಕ್ತರ ಜೈಕಾರದೊಂದಿಗೆ ಶ್ರೀ ಬಸವೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಗುಡಿತುಂಬಿಸುವ ಮೂಲಕ 91 ನೇ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.


ಶ್ರೀಕ್ಷೇತ್ರ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥಸ್ವಾಮೀಜಿ, ಗುಡಿಗೌಡ ಪ್ರಕಾಶ್, ಕಬ್ಬಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಮಾಜಿ ಸದಸ್ಯ ಶ್ರೀಕಂಠು, ಗ್ರಾಮದ ಪ್ರಮುಖರಾದ ನಂದೀಶ್, ಗಣೇಶ್‌ಗೌಡ, ಜವರೇಗೌಡ, ಕಬ್ಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net