ಕಬ್ಬಳಿ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹ

13 HRS 01
???????
Published on

ಹಿರೀಸಾವೆ : ಬದುಕಿನ ಬಂಡಿಯಲ್ಲಿ ಪತಿ, ಪತ್ನಿ ಇಬ್ಬರೂ ಎರಡು ಚಕ್ರಗಳಂತೆ ಒಗ್ಗೂಡಿ ಸಾಗಿದರೆ ಜೀವನದ ಯಶಸ್ಸಿನ ದಡವನ್ನು ಸರಾಗವಾಗಿ ಸೇರಲು ಸುಲಭವಾಗಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಹೋಬಳಿಯ ಪುರಾಣ ಪ್ರಸಿದ್ಧ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಹಿರಿಯ ನಾಗರಿಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಜೀವನದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಿ ಹೆಜ್ಜೆ ಇರಿಸಿದರೆ ಬದುಕು ಸುಂದರವಾಗಿರುತ್ತದೆ. ಜತೆಗೆ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸೇವೆ ಸಲ್ಲಿಸುವ ಹವ್ಯಾಸ ರೂಢಿಸಿಕೊಂಡರೆ ಆನಂದ ದೊರಕುತ್ತದೆ ಎಂದರು. ಮಾನವ ಜನ್ಮ ಬಹಳ ಶ್ರೇಷ್ಠವಾಗಿದೆ. ಅಷ್ಟೇ ಅಪರೂಪವೂ ಆಗಿದೆ. ನೂರಾರು ಜನ್ಮಗಳನ್ನು ಪೂರೈಸಿದ ನಂತರ ದೊರಕಿರುವ ಮಹಾಭಾಗ್ಯವನ್ನು ಉತ್ತಮ ಕಾರ್ಯ ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಮನುಷ್ಯನಾಗಿ ಬಾಳುವುದು, ಉದ್ದೇಶಿತ ಗುರಿ ಸಾಧಿಸುವುದು ಇಂದು ಅಗತ್ಯವಾಗಿದೆ ಎಂದರು.

ಸತ್ಕಾರ್ಯಗಳನ್ನು ಮಾಡೋಣ: ನಿಸರ್ಗದ ಹಿಂದೆ ನಿಂತು ಜಗತ್ತನ್ನು ಮುನ್ನಡೆಸುವ ಅದ್ಭುತವಾದ ಮಹಾನ್ ಶಕ್ತಿಯೊಂದು ಇದೆ. ಅದು ನಮ್ಮೆಲ್ಲರ ಮೂಲಕ ಸತ್ಕಾರ್ಯಗಳನ್ನು ಮಾಡಿಸಲು ಪ್ರೇರಣೆ ನೀಡುತ್ತದೆ. ಅಶಿಸ್ತಿನ ಬದುಕನ್ನು ತೊರೆದು ಸನ್ಮ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆಗೆ ಎಲ್ಲರೂ ಪಾತ್ರರಾಗುತ್ತೇವೆ ಎಂದು ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಮಾದರಿಯಾಗಿ ಬದುಕಿ: ಪ್ರಕೃತಿಯಿಂದ ಉಸಿರನ್ನು ಸಾಲವಾಗಿ ಪಡೆದು ಬಂದಿರುವ ನಾವು ಹಿಂದಿರುಗುವಾಗ ಅದರ ಋಣವನ್ನು ಮರುಪಾವತಿಸಲೇಬೇಕು. ಕೆಲವೇ ವರ್ಷಗಳ ಬದುಕಿನಲ್ಲಿ ಉತ್ತಮ ಶೈಲಿ, ನಡೆ-ನುಡಿ, ಸಂಪ್ರದಾಯ ಆಚರಣೆ, ಗುರುಭಕ್ತಿ ಮತ್ತು ಪರೋಪಕಾರ ಮೊದಲಾದವುಗಳನ್ನು ನಮ್ಮದಾಗಿಸಿಕೊಂಡು ಸತಿ-ಪತಿಗಳು ಹೊಸ ಪೀಳಿಗೆಗೆ ಮಾದರಿಯಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಹಿರಿಯರಿಗೆ ಸನ್ಮಾನ: ನವ ಜೀವನಕ್ಕೆ ಕಾಲಿಟ್ಟ ವಧು-ವರರಿಗೆ ವಸ್ತ್ರಗಳು, ಪೇಟ, ಬಾಸಿಂಗ, ಮಾಂಗಲ್ಯ, ಕಾಲುಂಗುರ ಮೊದಲಾದ ಮಂಗಳ ದ್ರವ್ಯಗಳನ್ನು ಉಚಿತವಾಗಿ ನೀಡಿ ಸನ್ನಿಧಿಯಲ್ಲಿ ವಿವಾಹ ನೆರವೇರಿಸಲಾಯಿತು. 18 ಜೋಡಿ ಹಿರಿಯ ನಾಗರಿಕರಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು. ದಾನಿಗಳಾದ ಬೆಂಗಳೂರು ಪ್ರದೀಪ, ವೆಂಕಟೇಶ್ ಪ್ರಸಾದ್ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ಗುಣನಾಥ ಸ್ವಾಮೀಜಿ, ಕೆಂಎಂಎಫ್ ಅಧ್ಯಕ್ಷ ಗೋಪಾಲಯ್ಯ, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ಎನ್.ಆರ್.ರತ್ನರಾಜ್, ಪ್ರಮುಖರಾದ ಗಣೇಶ್‌ಗೌಡ, ಹೊನ್ನೇಗೌಡ, ಗುಡಿಗೌಡ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net