ಕಬ್ಬಳಿ ಪುಷ್ಕರಣಿಯಲ್ಲಿ ಚುಂಚಶ್ರೀ ತೆಪ್ಪೋತ್ಸವ

12 HRS 01
Published on

ಹಿರೀಸಾವೆ : ಹೋಬಳಿಯ ಪುರಾಣ ಪ್ರಸಿದ್ಧ ಕ್ಷೇತ್ರ ಕಬ್ಬಳಿ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಬೃಹತ್ ಜಾತ್ರಾ ಮಹೋತ್ಸವದ ಪ್ರಯುಕ್ತ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖ ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದು, ಸಕಲ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಪ್ರಾತಃ 6 ಗಂಟೆಗೆ ಬಸವೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕದ ಬಳಿಕ ಅಲಂಕಾರ, ದೀಪದಾರತಿ ನೆರವೇರಿತು.

ಜಾನುವಾರು ಪ್ರದಕ್ಷಿಣೆ: ವ್ಯಾಪ್ತಿಯ ರೈತರು ತಮ್ಮ ಜಾನುವಾರುಗಳನ್ನು ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಮೂರು ಬಾರಿ ಪ್ರದಕ್ಷಣೆ ಹಾಕಿಸಿ ತೀರ್ಥ ಪ್ರೋಕ್ಷಣೆ ಮಾಡಿಸಿದರು. ಹರಕೆ ಹೊತ್ತ ಭಕ್ತರು ಸ್ವಾಮಿಯ ಸರ್ಪೋತ್ಸವ ನಡೆಸಿ ಹರಕೆ ಸಲ್ಲಿಸಿದರು.

ಸಂಜೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರ ಗೊಂಡಿದ್ದ ಮುತ್ತಿನ ಪಲ್ಲಕ್ಕಿ ಮೇಲೆ ಆಸೀನರಾಗುತಿದ್ದಂತೆ ಭಕ್ತರ ಜಯಘೋಷ ಮೊಳಗಿತು. ಇದೇ ಸಂದರ್ಭ ಬಸವೇಶ್ವರಸ್ವಾಮಿ ಎತ್ತಿನ ಬಂಡಿ ಉತ್ಸವ ಹಾಗೂ ಚೌಡೇಶ್ವರಿ ದೇವಿ ಉತ್ಸವವೂ ನಡೆದಿದ್ದು ವಿಶೇಷವಾಗಿತ್ತು. ಡೊಳ್ಳು ಕುಣಿತ, ಚಂಡೆ, ಕೋಲಾಟ ಹಾಗೂ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು. ಉತ್ಸವ ಸಾಗಿದಂತೆಲ್ಲ ಭಕ್ತರು ಕರ್ಪೂರ ಬೆಳಗಿ ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net