ಕಬ್ಬಳಿ ಗ್ರಾಪಂಗೆ ಕೆ.ಪೃಥ್ವಿಕುಮಾರ್ ಅಧ್ಯಕ್ಷ

26 CRP 01
Published on

ಚನ್ನರಾಯಪಟ್ಟಣ: ತಾಲೂಕಿನ ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಡಲೀಕನಹಳ್ಳಿ ಗ್ರಾಮದ ಕೆ.ಪೃಥ್ವಿಕುಮಾರ್ ಶುಕ್ರವಾರ ಅವಿರೋಧ ಆಯ್ಕೆಯಾದರು.

ಪಂಚಾಯಿತಿಯು 14 ಸದಸ್ಯರ ಬಲ ಹೊಂದಿದ್ದು, ರಾಜೇಗೌಡ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ಜರುಗಿತು. ಕೆ.ಪೃಥ್ವಿಕುಮಾರ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರನ್ನೇ ಅವಿರೋಧ ಆಯ್ಕೆ ಮಾಡಲಾಯಿತು.

ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನೀಲ್‌ಕುಮಾರ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾದ ಕೆ.ಪೃಥ್ವಿಕುಮಾರ್ ಅವರನ್ನು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.

ನೂತನ ಅಧ್ಯಕ್ಷ ಕೆ.ಪೃಥ್ವಿಕುಮಾರ್ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹಕಾರದೊಂದಿಗೆ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಬ್ಬಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ರಸ್ತೆ ಮತ್ತು ಚರಂಡಿ ನಿರ್ಮಾಣ, ಬೀದಿದೀಪ ನಿರ್ವಹಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜು, ಉಪಾಧ್ಯಕ್ಷೆ ಕವಿತಾ ಕೃಷ್ಣೇಗೌಡ, ಮಾಜಿ ಅಧ್ಯಕ್ಷರಾದ ರಾಜು, ಶಿವನಂಜೇಗೌಡ, ಬಿಳಿಕೆರೆ ರಂಗೇಗೌಡ, ಸದಸ್ಯರಾದ ರತ್ನ ಕುಮಾರಸ್ವಾಮಿ, ಟಿ.ಮಂಜೇಗೌಡ, ನಂಜಮ್ಮ, ಸುಮ, ಗೌರಮ್ಮ, ಮಂಗಳಮ್ಮ, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net