

ಚಿತ್ರದುರ್ಗ: ಕಬೀರಾನಂದಾಶ್ರಮದ 93ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಪಲ್ಲಕ್ಕಿ ಹಾಗೂ ಜನಪದ ಉತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಹಳದಿ, ಬಿಳಿ, ಕಲರ್ ಸೇವಂತಿ, ಕನಕಾಂಬರ, ಚೆಂಡು ಹೂವು ಸೇರಿ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಪಲ್ಲಕ್ಕಿಯನ್ನು ಟ್ರಾೃಕ್ಟರ್‌ನಲ್ಲಿ ಇಡಲಾಯಿತು. ನಂತರ ಸ್ವಾಮೀಜಿ ಆಸೀನರಾದರು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು.
ಕಬೀರಾನಂದಸ್ವಾಮಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಉತ್ಸವಕ್ಕೆ ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಶ್ರೀಮಠದ ಮುಂಭಾಗ ಚಾಲನೆ ನೀಡಿದರು.
ಕಹಳೆ, ಉರುಮೆ, ತಮಟೆ, ಕೀಲು ಕುದುರೆ, ಜಾಂಜ್, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ತಟ್ಟೆರಾಯ, ಶಾರದಾ ಬ್ರಾಸ್‌ಬ್ಯಾಂಡ್, ಗೊರವಪ್ಪ, ಛತ್ರಿ ಚಾಮರ ಸೇರಿ ಇತರೆ ಜನಪದ ಕಲಾ ತಂಡಗಳು ಮೆರುಗು ನೀಡಿದವು.
ಆಶ್ರಮದಿಂದ ಆರಂಭವಾದ ಮೆರವಣಿಗೆ ದೊಡ್ಡಪೇಟೆ, ಮೈಸೂರ್ ಕೆಫೆ, ವಾಸವಿ ವಿದ್ಯಾಸಂಸ್ಥೆ, ಪಾರ್ಶ್ವನಾಥ ಸ್ಕೂಲ್, ಆನೆಬಾಗಿಲು, ಗಾಂಧಿ ವೃತ್ತ, ಎಸ್‌ಬಿಐ ಬ್ಯಾಂಕ್, ಇ.ಪಿ.ಬ್ರದರ್ಸ್, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠ, ಕರುವಿನಕಟ್ಟೆ ವೃತ್ತದ ಮಾರ್ಗವಾಗಿ ಸಂಚರಿಸಿ ಸಂಜೆ ಮಠ ತಲುಪಿತು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಜ್ಞಾನ ವಿಕಾಸ ಪಾಲಿಟೆಕ್ನಿಕ್, ಕಬೀರಾನಂದಸ್ವಾಮಿ ನರ್ಸಿಂಗ್, ಪ್ರಥಮ ದರ್ಜೆ ಬಿ.ಇಡಿ, ಪಿಯು ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಮಠದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ರಾಜ್ಯದ ಉಡುಗೆ ಧರಿಸಿ ಭಾವೈಕ್ಯತೆ ಸಂದೇಶ ಸಾರಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ನಾಗರಿಕರು ಮೆರವಣಿಗೆ ವೀಕ್ಷಿಸಿದರು.
ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಜೆ.ಲತಾ, ನಂದಿ ನಾಗರಾಜ್, ಪ್ರಶಾಂತ್, ನಾಗರಾಜ್ ಸಂಗಂ, ಸತೀಶ್, ಓಂಕಾರ್, ರುದ್ರೇಶ್, ಪ್ರಭಂಜನ್, ನಿರಂಜನಮೂರ್ತಿ, ನಾಗರಾಜ್ ಶಾಸ್ತ್ರೀ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ಯೋಗೀಶ್ ಇತರರಿದ್ದರು.