ಕಬಿನಿ ಹಿನ್ನೀರಿನಲ್ಲಿ ಜಲ ವಿಮಾನ ನಿಲ್ದಾಣ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಹಸಿ

ರು ಕಾಡುಗಳು ಮತ್ತು ವಿಶಾಲವಾದ ನೀರಿನ ಪ್ರದೇಶದಿಂದ ಕೂಡಿರುವ ಕಬಿನಿ ಹಿನ್ನೀರಿನಲ್ಲಿ ಜಲ ವಿಮಾನ ನಿಲ್ದಾಣ(ವಾಟರ್ ಏರೋಡ್ರೋಮ್) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದು ಮೈಸೂರು ಪ್ರವಾಸೋದ್ಯಮಕ್ಕೆ ಇನ್ನಷ್ಟು ಚೈತನ್ಯ ತರಲಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗಲಿದೆ.

ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಉಡಾನ್-5.2 (ಶ್ರೀಸಾಮಾನ್ಯನಿಗೂ ವಿಮಾನಯಾನ ಯೋಗ) ಯೋಜನೆಯಡಿ ಕೇಂದ್ರ ವಿಮಾನಯಾನ ಸಚಿವಾಲಯ ಇದನ್ನು ಕಾರ್ಯಗತಗೊಳಿಸುತ್ತಿದೆ. ಇದು ಸಾಕಾರಗೊಂಡರೆ ಮೈಸೂರು ಪ್ರವಾಸೋದ್ಯಮಕ್ಕೆ ಮತ್ತೊಂದು ಹಿರಿಮೆ ಮುಡಿಗೇರಲಿದ್ದು, ಶುಕ್ರದೆಸೆಯೂ ಶುರುವಾಗಲಿದೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಹಿನ್ನೀರಿನಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದಕ್ಕೆ ಖಾಸಗಿ ಸಂಸ್ಥೆಗಳು ಆಸಕ್ತಿ ತೋರಿಸಿವೆ. ಈ ಯೋಜನೆಯಿಂದ ವಾಯುಮಾರ್ಗವಾಗಿ ಕಬಿನಿ ಹಿನ್ನೀರಿಗೆ ಪ್ರವಾಸಿಗರು ಭೇಟಿ ಕೊಡಬಹುದಾಗಿದೆ. ಸದ್ಯಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಇಲ್ಲಿಂದ ರಸ್ತೆ ಮೂಲಕ ಇಲ್ಲಿಗೆ ತೆರಳಬಹುದಾಗಿದೆ.

ಕಬಿನಿ ಜಲಾಶಯವು ವನ್ಯಜೀವಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗಡಿಯಲ್ಲಿದೆ. ಕೇರಳ, ತಮಿಳುನಾಡಿ ಗಡಿಗೂ ಹತ್ತಿರವಾಗಿದೆ. ಇದರಿಂದ ನೆರೆ ರಾಜ್ಯದ ಪ್ರವಾಸಿಗರು ಇಲ್ಲಿಗೆ ಸುಲಭವಾಗಿ ಬರಲು ಅವಕಾಶ ದೊರೆಯಲಿದೆ.

ರಾಜ್ಯದಲ್ಲಿ ಆರು ಕಡೆ ನಿರ್ಮಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲಿಖಿತ ಉತ್ತರ ನೀಡಿದ್ದು, ಈ ಸಂದರ್ಭದಲ್ಲಿ ಉಡಾನ್ ಯೋಜನೆಯಡಿ ವಾಟರ್ ಏರೋಡ್ರೋಮ್ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ.

ಕಬಿನಿ ಹಿನ್ನೀರಿನಲ್ಲಿ, ಉಡುಪಿ ಜಿಲ್ಲೆಯ ಮಲ್ಪೆ, ಸೂಪಾ ಜಲಾಶಯ(ಗಣೇಶಗುಡಿ), ಕಾರವಾರದ ಕಾಳಿ ನದಿ, ಮಂಗಳೂರು, ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯ ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣವಾಗಲಿದೆ. ಇದರಲ್ಲಿ ಯಾವುದು ಮೊದಲು ನಿರ್ಮಾಣವಾಗುತ್ತದೆಯೇ ಅದುವೇ ರಾಜ್ಯದ ಪ್ರಥಮ ಜಲ ವಿಮಾನ ನಿಲ್ದಾಣ ಎಂಬ ಗರಿಮೆಗೆ ಪಾತ್ರವಾಗಲಿದೆ.

ವಾಟರ್ ಏರೋಡ್ರೋಮ್ ನಿರ್ವಹಣೆ ಸರಳ

ಇದು ಯೂರೋಪ್ ಖಂಡ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಜಲ ಸಂಪರ್ಕಕ್ಕಾಗಿ ವಾಟರ್ ಏರೋಡ್ರೋಮ್ ಸಾರಿಗೆ ವ್ಯವಸ್ಥೆ ಹೆಚ್ಚು ಬಳಕೆಯಲಿದೆ. ನೀರಿನ ಮೇಲೆ ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ.

ಇದನ್ನು ವಾಟರ್ ಏರೋಡ್ರೋಮ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಟರ್ ಏರೋಡ್ರೊಮ್ ನಿರ್ಮಿಸಲಾಗುತ್ತದೆ.

6ರಿಂದ 20 ಆಸನಗಳನ್ನು ಒಳಗೊಂಡಿರುವ ಸಣ್ಣ ವಿಮಾನಗಳು ಇಲ್ಲಿ ಇಳಿಯುವ ವ್ಯವಸ್ಥೆ ಇರುತ್ತದೆ. ಇದು ವಿಮಾನ ನಿಲ್ದಾಣಕ್ಕಿಂತ ಕಡಿಮೆ ಖರ್ಚಿನ ವ್ಯವಸ್ಥೆಯಾಗಿದೆ. ಸುಲಭ, ಸರಳ ಜಲಮಾರ್ಗವಾಗಿ ಇದು ಬಳಕೆಯಾಗುತ್ತದೆ. ಇದರ ನಿರ್ವಹಣೆ ಅಷ್ಟು ಕಷ್ಟಕರವಲ್ಲ.

ವನ್ಯಜೀವಿಗಳಿಗೆ ಆಶ್ರಯ ತಾಣ

ಕಬಿನಿ ಹಿನ್ನೀರು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಪಕ್ಷಿ ವೀಕ್ಷಣೆಗೆ ಸೂಕ್ತವಾದ ಸ್ಥಳವೂ ಹೌದು. ಬಿದರಹಳ್ಳಿ ಮತ್ತು ಬೀಚನಹಳ್ಳಿ ಸಮೀಪ ಕಬಿನಿ ಅಥವಾ ಕಪಿಲಾ ನದಿಗೆ ಅಡ್ಡಲಾಗಿ 1959ರಲ್ಲಿ ಜಲಾಶಯ ನಿರ್ಮಿಸಲಾಗಿದೆ.

ಇದರಿಂದ ಸೃಷ್ಟಿಯಾಗಿರುವ ಹಿನ್ನೀರು ವನ್ಯಜೀವಿಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ, ಸಮೃದ್ಧ ಹುಲ್ಲುಗಾವಲುಗಳು ವನ್ಯಜೀವಿಗಳಿಗೆ ಆಹಾರ ಒದಗಿಸುತ್ತವೆ. ಇಲ್ಲಿ ಹುಲಿ, ಆನೆ, ವಿವಿಧ ಬಗೆಯ ಪಕ್ಷಿಗಳನ್ನು ವೀಕ್ಷಿಸಬಹುದು.

ಕಪಿಲಾ ನದಿಯು ಪಶ್ಚಿಮ ಘಟ್ಟದ ಸುಂದರವಾದ ಕಾಡುಗಳ ಮೂಲಕ ಹರಿಯುತ್ತದೆ. ಈ ಹಿನ್ನೀರು ಹಸಿರು ಕಾಡುಗಳಿಂದ ಆವೃತವಾಗಿದ್ದು, ಪ್ರಶಾಂತ ವಾತಾವರಣವನ್ನು ನೀಡುತ್ತದೆ.

ಅರಣ್ಯ ಇಲಾಖೆಯಿಂದ ಈ ಪ್ರದೇಶದಲ್ಲಿ ಸಫಾರಿ ವ್ಯವಸ್ಥೆಯೂ ಇದೆ. ಈ ಮೂಲಕ ಪ್ರವಾಸಿಗರು ವನ್ಯಜೀವಿಗಳನ್ನು ಮತ್ತು ಪ್ರಕೃತಿಯನ್ನು ಹತ್ತಿರದಿಂದ ಅನುಭವಿಸಬಹುದು. ಈ ಪ್ರದೇಶದಲ್ಲಿ ವಿವಿಧ ಪ್ರಭೇದಗಳ ಪಕ್ಷಿಗಳನ್ನು ಕಾಣಬಹುದು. ಇದು ಪಕ್ಷಿಪ್ರಿಯರಿಗೆ ಸ್ವರ್ಗಸದೃಶ ತಾಣವಾಗಿದೆ. ಈ ಹಿರಿಮೆಯಿಂದಲೇ ಪ್ರಸಿದ್ಧ ಪ್ರವಾಸಿ ತಾಣವಾಗಿ ರೂಪಗೊಂಡಿದ್ದು, ದೇಶ-ವಿದೇಶಗಳಿಂದ ಇಲ್ಲಿಗೆ ಪ್ರವಾಸಿಗರು ದೌಡಾಯಿಸುತ್ತಾರೆ.

ವಾಟರ್ ಏರೋಡ್ರೋಮ್ ಸ್ಥಾಪನೆಯಿಂದ ಸಂಪರ್ಕ ಮಾರ್ಗ ಇನ್ನಷ್ಟು ಸುಧಾರಣೆಯಾಗಲಿದೆ. ಪಕ್ಕದ ಕೇರಳ, ತಮಿಳುನಾಡಿನ ಪ್ರವಾಸಿಗರನ್ನೂ ಆಕರ್ಷಿಸಬಹುದಾಗಿದೆ. ವನ್ಯಜೀವಿ, ಅರಣ್ಯ ಪ್ರವಾಸಿಗರನ್ನು ಇಲ್ಲಿಗೂ ಸೆಳೆಯಬಹುದಾಗಿದೆ.

ಉಡಾನ್-5.2 ಯೋಜನೆಯಡಿ ಕಬಿನಿ ಹಿನ್ನೀರಿನಲ್ಲಿ ಜಲ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ವರ್ಷದ ಹಿಂದೆಯೇ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದರು. ಇದೀಗ ಇದಕ್ಕೆ ಅನುಮೋದನೆ ದೊರೆತಿದೆ ಎಂಬ ವಿಚಾರ ತಿಳಿದು ಬಂದಿದೆ. ಆದರೆ, ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಇದು ಬಂದ ಬಳಿಕವೇ ಯಾವ ಸ್ಥಳದಲ್ಲಿ ಇದು ಜಾರಿಯಾಗಲಿದೆ ಎಂಬುದು ಸೇರಿದಂತೆ ಸಮಗ್ರ ಮಾಹಿತಿ ಗೊತ್ತಾಗಲಿದೆ. ಗಣೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಕಬಿನಿ ಜಲಾಶಯ) ಕಾವೇರಿ ನೀರಾವರಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net