ಕಬಿನಿ ಭರ್ತಿಗೆ 8 ಅಡಿ ಬಾಕಿ

23HDK4
Published on

ಎಚ್.ಡಿ.ಕೋಟೆ: ಮೈಸೂರು ಜಿಲ್ಲೆಯ ಜೀವನದಿ ಕಬಿನಿ ಪಾತ್ರದಲ್ಲಿ ನಿರಂತರ ಮಳೆಯಿಂದ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ ಭರ್ತಿ ಆಗಲು ಕೇವಲ 8 ಅಡಿ ಬಾಕಿ ಇದೆ. ಒಳ ಹರಿವಿನ ಪ್ರಮಾಣ ಈಗೆ ಮುಂದುವರಿದರೇ ಇನ್ನೂ ಮೂರಾಲ್ಕು ದಿನದಲ್ಲಿ ಜಲಾಶಯ ಭರ್ತಿ ಆಗುವ ಸಾಧ್ಯತೆ ಇದೆ.


ಕೇರಳದ ವಯನಾಡು ಜಿಲ್ಲಾ ವ್ಯಾಪ್ತಿ ಹಾಗೂ ತಾಲೂಕಿನ ಕಬಿನಿ ಹಿನ್ನೀರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶುಕ್ರವಾರ ಜಲಾಶಯದ ಒಳಹರಿವಿನ ಪ್ರಮಾಣ ಕೇವಲ 2,200 ಸಾವಿರ ಕ್ಯೂಸೆಕ್ ಇದ್ದದ್ದು ಭಾನುವಾರ ಸಂಜೆಗೆ 19 ಸಾವಿರ ಕ್ಯೂಸೆಕ್‌ಗೆ ಏರಿಕೆ ಆಗಿದೆ. ಇನ್ನೂ ಎರಡು ದಿನ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮಳೆ ಹೆಚ್ಚು ಆಗುವ ಲಕ್ಷಣ ಇದ್ದು, ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.


ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಬಾವಲಿ ಹೊಳೆ, ಕಾರಪುಂಜಾ, ಪನಾಮಾರಮ್, ವೈಸಿರಿ ಹೊಳೆಗಳ ಮೂಲಕ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಕಬಿನಿ ಜಲಾಶಯದಲ್ಲಿ ಈಗಾಗಲೇ 2,276 ಅಡಿ ನೀರು ಸಂಗ್ರಹವಾಗಿದ್ದು, ಸರಸರಿ ಮಟ್ಟ 2,284 ಅಡಿ ತಲುಪಲು 8 ಅಡಿ ಬಾಕಿ ಇದೆ.


ಸದ್ಯ ಜಲಾಶಯದಿಂದ 2,500 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದ್ದು, ಹುಲ್ಲಹಳ್ಳಿ ಸಮೀಪ ಇರುವ ರಾಂಪುರ ನಾಲೆ ಮೂಲಕ ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ ನೀರನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹರಿಸಲಾಗುತ್ತಿದೆ.


ಜಲಾಶಯದ ಒಟ್ಟು 19 ಟಿಎಂಸಿ ನೀರು ಶೇಖರಣೆ ಆಗಲಿದ್ದು, ಭಾನುವಾರ ಜಲಾಶಯದಲ್ಲಿ 14.5 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2,284 ಅಡಿ ಇದ್ದು ಒಳ ಹರಿವಿನ ಪ್ರಮಾಣ 17 ಸಾವಿರ ಇತ್ತು. 15 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿತ್ತು.
ಕಳೆದ ವರ್ಷ ಜು.17ಕ್ಕೆ ಭರ್ತಿ ಆಗಿ ಜು.20ಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗಿತ್ತು. ಆದರೆ ಈ ವರ್ಷ ಮುಂಗಾರು ಅವಧಿಗೆ ಸರಿಯಾಗಿ ಪ್ರಾರಂಭ ಆದರೂ ಕೂಡ ಮಳೆ ಪ್ರಮಾಣ ಕಡಿಮೆ ಆದ ಕಾರಣ ಜಲಾಶಯಕ್ಕೆ ನೀರು ಹರಿದು ಬರಲಿಲ್ಲ. ಹಾಗಾಗಿ ಒಂದು ವಾರ ತಡವಾಗಿ ಜಲಾಶಯ ಭರ್ತಿ ಆಗಲಿದೆ. ಜಲಾಶಯ ಭರ್ತಿ ಆಗುವುದಕ್ಕೆ ಮುಂಚಿತವಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರ ಕೆಂಗಣ್ಣಗೆ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net