

ಮೈಸೂರು: ಸ್ಮಾರ್ಟ್ ಮೀಟರ್ ಅಳವಡಿಕೆಗೆ ವಿರೋಧ ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವಲ್ಲಿ ನಿರ್ಲಕ್ಷೃ ತೋರಿರುವ ಮುಖ್ಯಮಂತ್ರಿ ನಿಲುವಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಗನ್‌ಹೌಸ್ ಹತ್ತಿರ ಇರುವ ಕುವೆಂಪು ಉದ್ಯಾನದಲ್ಲಿ ಸಭೆ ನಡೆಸಿದ ರೈತರು ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರವು ಮೊದಲ ಹಂತದಲ್ಲಿ ಸ್ಮಾರ್ಟ್‌ಮೀಟರ್ ಹಾಕಲು ಹೊರಟಿದೆ.
ಇದನ್ನು ಕೃಷಿ ವಲಯಕ್ಕೂ ವಿಸ್ತರಿಸಿ ರೈತರನ್ನು ಕೃಷಿಯಿಂದ ಹೊರಗೆ ಇಟ್ಟು ಬಂಡವಾಳಶಾಹಿಗಳಿಗೆ ಈ ಕ್ಷೇತ್ರವನ್ನು ಕೊಡಲು ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.
ಸ್ಮಾರ್ಟ್ ಮೀಟರ್ ಅಳವಡಿಕೆ ಗ್ರಾಹಕರಿಗೆ ಹೊರೆ ಆಗುತ್ತದೆ. ಬಲವಂತವಾಗಿ ಇದನ್ನು ಅಳವಡಿಕೆ ಮಾಡುವುದು ಸಹ ಸರಿಯಲ್ಲ. ಈ ಕ್ರಮವನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದರೆ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಆರ್‌ಎಸ್‌ಕೆ ಜಲಾಶಯದಲ್ಲಿ ಕಾವೇರಿ ನದಿಗೆ ಮಾತ್ರ ಬಾಗಿನ ಅರ್ಪಿಸಿ ಕಬಿನಿ ಜಲಾಶಯವನ್ನು ನಿರ್ಲಕ್ಷೃ ಮಾಡಿದ್ದಾರೆ. ತಮಿಳುನಾಡಿಗೆ ನೀರು ಬಿಡುವಾಗ ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆಯಿಂದ ತಪ್ಪಿಸಿಕೊಳ್ಳಲು ಕಬಿನಿ ಜಲಾಶಯ ನೆನಪಿಗೆ ಬರುತ್ತದೆ.
ಇಂತಹ ಸಂದರ್ಭದಲ್ಲಿ ಈ ಭಾಗದ ರೈತರನ್ನು ಬಲಿ ಕೊಟ್ಟು ನೀರನ್ನು ತಮಿಳುನಾಡಿಗೆ ಹರಿಸುವ ಸಿಎಂ ಮೊದಲು ಕಬಿನಿಗೆ ಬಾಗಿನ ಅರ್ಪಿಸಿ ಗೌರವ ಕೊಡಬೇಕಾಗಿತ್ತು ಎಂದು ಗುಡುಗಿದರು.
ಕಬಿನಿ ಡ್ಯಾಂ ಸುತ್ತಮುತ್ತಲಿನ ಕೆಲ ಪ್ರದೇಶಗಳನ್ನು ಸುಭಾಷ್ ಪವರ್ ಸ್ಟೇಷನ್‌ಗೆ ಖಾತೆ ಮಾಡಿರುವುದು, ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್‌ಗಳ ನಿರ್ಮಾಣ ಮತ್ತು ಕಳೆದ ಸಲ ಘೋಷಣೆ ಮಾಡಿರುವ ಯಾವುದೇ ಅಭಿವೃದ್ಧಿ ಕೆಲಸಗಳು ಕಾರ್ಯಗತವಾಗಿಲ್ಲ. ಈ ಬಗ್ಗೆ ಸ್ಪಷ್ಟನೆ ಕೊಡುವಲ್ಲಿ ವಿಫಲವಾಗಿರುವುದರಿಂದ ಸಿಎಂ, ಡಿಸಿಎಂ ಕಬಿನಿಗೆ ಬಾಗಿನ ಅರ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಳೆದ ಸಾಲಿನ ಕಬ್ಬಿನ ಬಾಕಿ 950 ಕೋಟಿ ರೂ. ಬಾಕಿ ಕೊಡಿಸುವಲ್ಲಿ ವಿಫಲವಾಗಿದೆ. ಪ್ರಸಕ್ತ ಸಾಲಿಗೆ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 4000 ರೂ. ನಿಗದಿಪಡಿಸಿಲ್ಲ. ರೈತರು, ಕಾರ್ಖಾನೆ ನಡುವೆ ದ್ವಿಪಕ್ಷಿಯ ಒಪ್ಪಂದ ಪತ್ರ ಜಾರಿ ಮಾಡುವಲ್ಲಿ ನಿರ್ಲಕ್ಷೃ ಮಾಡಿದೆ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸ ತಪ್ಪಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆ ಕೇಳಲು ಸಭೆ ಕರೆಯುತ್ತಿಲ್ಲ ಎಂದೂ ದೂರಿದರು.
ಪ್ರವಾಹ ಪರಿಸ್ಥಿತಿ ಇದ್ದರೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುತ್ತಿಲ್ಲ. ನಾಲೆಗಳ ದುರಸ್ತಿ ಮಾಡುವಲ್ಲಿ ನಿರ್ಲಕ್ಷೃ ಮಾಡಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬಲವಂತದ ಭೂ ವಶೀಕರಣವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಅಂತಹ ಸಂದರ್ಭ ಬಂದರೆ ರೈತರನ್ನು ಮಾಲೀಕರನ್ನಾಗಿ ಮಾಡಿಕೊಂಡು ಆ ಭೂಮಿಯನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಿ ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಗೌರವಾಧ್ಯಕ್ಷ ಶಿವರುದ್ರಪ್ಪ ಮುದ್ದಳ್ಳಿ, ಮುಖಂಡರಾದ ಮಧು ಶಿವಣ್ಣ, ನಾಗಣ್ಣ, ಗುರುಸಿದ್ದಪ್ಪ, ದೇವಿರಮ್ಮನಹಳ್ಳಿ ಸಿದ್ದಬಸಪ್ಪ, ಬಸವರಾಜು, ಪ್ರಭುಸ್ವಾಮಿ, ಪುಟ್ಟಸ್ವಾಮಿ, ಮನು, ಶ್ರೀಕಂಠಸ್ವಾಮಿ, ಸುರೇಶ್ ಟೈಲರ್, ಬಸಪ್ಪ, ಯು.ಪಿ.ನಾಗರಾಜ್ ಇನ್ನಿತರರಿದ್ದರು.