

ಬೇಲೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಶುಕ್ರವಾರ ರಾತ್ರಿ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಉದ್ಘಾಟಿಸಿದರು.
ಬೇಲೂರಿನಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಕರು ಹಬ್ಬದ ವಾತಾವರಣ ನಿರ್ಮಿಸಿದ್ದಾರೆ. ಇಂತಹ ಕ್ರೀಡಾಕೂಟಗಳು ಇನ್ನೂ ಹೆಚ್ಚು ನಡೆಯಲಿ. ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪಟ್ಟದಲ್ಲಿ ಭಾಗವಹಿಸಿ ಬೇಲೂರಿನ ಕೀರ್ತಿ ಪತಾಕೆ ಹಾರಿಸುವ ಕೆಲಸ ಮಾಡಲಿ. ಜತೆಗೆ ರಾಷ್ಟ್ರೀಯ ಕ್ರೀಡಾಪಟುಗಳೊಂದಿಗೆ ಸ್ಥಳೀಯ ತಂಡದ ಆಟಗಾರರು ಭಾಗವಹಿಸಿ, ಹೆಚ್ಚಿನ ಅನುಭವ ಪಡೆದು ಅವರಂತೆ ರಾಷ್ಟ್ರ, ಅಂತರ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು ಎಂದರು.
ಹಿರಿಯ ಕ್ರೀಡಾಪಟು ಹಾಗೂ ವೈಡಿಡಿ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯೆ ಸೌಮ್ಯಾ ಆನಂದ್ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಏನು ಕಮ್ಮಿ ಇಲ್ಲ. ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಕಬಡ್ಡಿಯಂತಹ ಕ್ರೀಡೆಯಲ್ಲೂ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಬೇಲೂರಿನಲ್ಲಿ ಇಂತಹ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಿ.ಎಚ್.ಮಹೇಶ್, ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಮಹೇಶ್, ಖಜಾಂಚಿ ಎ.ಆರ್.ಕರೀಗೌಡ, ನಿರ್ದೇಶಕರಾದ ಜಯರಾಂ, ಭರತ್, ಕರವೇ ತಾ. ಅಧ್ಯಕ್ಷ ಭೋಜೇಗೌಡ, ಜಿಪಂ ಮಾಜಿ ಸದಸ್ಯ ಅಮಿತ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಶಶಿಕುಮಾರ್, ಕಸಾಪ ಮಾಜಿ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಸರ್ವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್.ಪ್ರಕಾಶ್, ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ದಿನೇಶ್, ಪ್ರತಾಪ, ನಾಗರಾಜು, ವಿಜಯ್ ಕುಮಾರ್, ಅಶ್ವತ್ಥ್ ಇದ್ದರು.