ಕಬಡ್ಡಿ ಪಟುಗಳಿಗೆ ಗುರುಕುಲ ಆಸರೆ

14SRL01
ಶಿರಾಳಕೊಪ್ಪದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು.
Published on

ಎಂ.ನವೀನ್‌ಕುಮಾರ್ ಶಿರಾಳಕೊಪ್ಪ ರಾಜ್ಯದ ಬಹುತೇಕ ಗ್ರಾಮಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಕಬಡ್ಡಿ ಪಂದ್ಯಾವಳಿಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯತ್ತವೆ. ಗ್ರಾಮೀಣ ಭಾಗದಲ್ಲಿ ಸಾವಿರಾರು ಪ್ರತಿಭಾವಂತ ಕ್ರೀಡಾಪಟುಗಳು ಸಹ ಇದ್ದಾರೆ. ಆದರೆ ಸೂಕ್ತ ಮಾರ್ಗದರ್ಶನ, ಆರ್ಥಿಕ ತೊಂದರೆ ಕಾರಣ ಪ್ರತಿಭೆಗಳು ಕಮರಿ ಹೋಗುತ್ತಿವೆ. ಇಂತಹ ಕ್ರೀಡಾಪಟುಗಳ ಸಮಸ್ಯೆಗಳನ್ನು ಪರಿಹರಿಸಿ, ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಗುರುಕುಲ ಸ್ಪೋರ್ಟ್ಸ್ ಕ್ಲಬ್ ಏರ್ಪಡಿಸುತ್ತಿರುವ ಶಿಬಿರ ಅನೇಕ ಕ್ರೀಡಾಪಟುಗಳಿಗೆ ನೆರವಾಗಿದೆ. ರಾಜ್ಯದಲ್ಲಿ ಖಾಸಗಿ ಕಬಡ್ಡಿ ತರಬೇತಿ ಕೇಂದ್ರಗಳ ಸಂಖ್ಯೆ ತೀರಾ ವಿರಳ. ಆದ್ದರಿಂದ ಪಟ್ಟಣದ ಗುರುಕುಲ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಕಬಡ್ಡಿ ತರಬೇತಿ ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ 12ರಿಂದ 25 ವರ್ಷದೊಳಗಿನ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಸರ್ಕಾರದ ಸಹಾಯವಿಲ್ಲದೆ ಸಂಪೂರ್ಣವಾಗಿ ಕಬಡ್ಡಿ ಪ್ರೇಮಿಗಳು ಮತ್ತು ಗ್ರಾಮೀಣ ಯುವಕರ ಪ್ರೋತ್ಸಾಹದಿಂದಲೇ ಶಿಬಿರ ಆಯೋಜಿಸಲಾಗುತ್ತಿದೆ. ದೇಸಿ ಕ್ರೀಡೆ ಕಬಡ್ಡಿಗೆ ಸೂಕ್ತ ತರಬೇತಿ ಇಲ್ಲದೆ ರಾಜ್ಯದ ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಮಸ್ಯೆ ಸರಿಪಡಿಸುವ ಉದ್ದೇಶದಿಂದ ಕಬಡ್ಡಿ ಕ್ರೀಡೆಯಲ್ಲಿ ಆಸಕ್ತಿಹೊಂದಿದ ಯುವಕರು 21 ದಿನಗಳ ವಿಶೇಷ ಶಿಬಿರ ನಡೆಸಿದ್ದಾರೆ. ಈ ಶಿಬಿರ ಅನೇಕ ಕ್ರೀಡಾಪಟುಗಳಿಗೆ ಆಸರೆಯಾಗಿದೆ. ಶಿಬಿರದಲ್ಲಿ ಮಂಡ್ಯ, ಹಾವೇರಿ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ಹಲವಾರು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಬಂದ ಪ್ರತಿಭಾವಂತ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಸರ್ಕಾರದ ಸೌಲಭ್ಯಕ್ಕಾಗಿ ಕಾದು ಕುಳಿತಿದ್ದ ಗ್ರಾಮೀಣ ಕ್ರೀಡಾಪಟುಗಳಿಗೆ ಈ ಶಿಬಿರ ಆಶಾಕಿರಣವಾಗಿದೆ. ಶಿರಾಳಕೊಪ್ಪದಂತಹ ಸಣ್ಣ ಪಟ್ಟಣದ ಮಡಿಲಲ್ಲಿ ಬೆಳೆಯುತ್ತಿರುವ ಈ ಕಬಡ್ಡಿ ಬೆಳವಣಿಗೆ ರಾಜ್ಯದ ಇತರ ಭಾಗಗಳಿಗೂ ಪ್ರೇರಣೆ ಆಗುವುದರಲ್ಲಿ ನಿಸ್ಸಂದೇಹ.

ಪ್ರೋ ಕಬಡ್ಡಿ ವಂಚಿತ ಸ್ಥಳೀಯ ಕ್ರೀಡಾಪಟುಗಳಾದ ರವಿ, ಆಂಜನೇಯ, ಪ್ರತಾಪ, ಓಂಪ್ರಕಾಶ, ಆಕಾಶ ಎಂಬುವವರು ರಾಜ್ಯ, ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಪ್ರೋ ಕಬಡ್ಡಿಯಲ್ಲಿ ಅಂತಿಮ ಘಟ್ಟದ ಆಯ್ಕೆವರೆಗೂ ತೆರಳಿದಾಗ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಅವಕಾಶ ವಂಚಿತರಾದ ಕಾರಣ ಮುಂದಿನ ಪೀಳಿಗೆ ಈ ಸಮಸ್ಯೆ ಎದುರಿಸಬಾರದು ಎಂಬ ಸದುದ್ದೇಶದಿಂದ ಕಬಡ್ಡಿ ತರಬೇತಿ ಶಿಬಿರ ಆರಂಭಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಇಂತಹ ಪ್ರಯತ್ನಗಳು ಹಲವು ಕ್ರೀಡಾಪಟುಗಳಿಗೆ ನೆರವಾಗುತ್ತಿರುವುದು ಒಳ್ಳೆಯ ಸಂಗತಿ. ಸಾಮಾಜಿಕ ಜಾಲತಾಣ ಬಳಕೆ ಕಬಡ್ಡಿ ತರಬೇತಿ ಪಡೆಯಲು ದೂರದ ಜಿಲ್ಲೆಗಳ ಜನರು ಶಿರಾಳಕೊಪ್ಪಕ್ಕೆ ಬಂದಿದ್ದು ಹೇಗೆ ಎಂದು ಆಶ್ಚರ್ಯವಾಗಬಹುದು. ಇದಕ್ಕಾಗಿ ಕ್ಲಬ್‌ನ ಸದಸ್ಯರು ಬಳಸಿಕೊಂಡಿದ್ದು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು. ಕಬಡ್ಡಿ ಶಿಬಿರದ ಮಾಹಿತಿ ಪಡೆದು, ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಈ ಚಿಕ್ಕ ಪಟ್ಟಣಕ್ಕೆ ಆಗಮಿಸಿದ್ದರು. 21 ದಿನಗಳ ತರಬೇತಿಗೆ ಬರುವವರಿಂದ ಊಟ ಮತ್ತು ವಸತಿ ಶುಲ್ಕ ಹೊರತುಪಡಿಸಿ ತರಬೇತಿ ಶುಲ್ಕ ಪಡೆಯುವುದಿಲ್ಲ. ಕಬಡ್ಡಿ ತರಬೇತಿಗೆ ಬೇಕಾದ ಮೂಲ ಸೌಕರ್ಯಗಳಾದ ಮ್ಯಾಟ್, ಫಿಟ್ನೆಸ್ ಪರಿಕರಗಳು, ವಸತಿ, ಕೊಠಡಿಗಳನ್ನು ಪ್ರತಿನಿತ್ಯದ ಬಾಡಿಗೆ ವೆಚ್ಚವನ್ನು ದಾನಿಗಳಿಂದ ನೆರವಿನಿಂದ ಭರಿಸುತ್ತಿದ್ದಾರೆ ಕ್ಲಬ್‌ನ ಸದಸ್ಯರು. ಇದಕ್ಕೆ ಸರ್ಕಾರ ಮತ್ತು ಇನ್ನಷ್ಟು ದಾನಿಗಳ ಸಹಕಾರ ದೊರೆತರೆ ಇನ್ನಷ್ಟು ಪ್ರೋತ್ಸಾಹ ಲಭಿಸಿದಂತಾಗುತ್ತದೆ ಎನ್ನುತ್ತಾರೆ ಕ್ಲಬ್‌ನ ಸದಸ್ಯರು. ನನಗೆ ಕಬಡ್ಡಿ ಕ್ರೀಡೆಯಲ್ಲಿ ತುಂಬ ಆಸಕ್ತಿ ಇದೆ. ಸೂಕ್ತ ತರಬೇತಿ ಇಲ್ಲದೆ ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇಲ್ಲಿ ತರಬೇತಿ ಪಡೆದಿದ್ದು, 14 ವರ್ಷದ ಒಳಗಿನ ರಾಜ್ಯ ಮಟ್ಟದ ಕಬಡ್ಡಿ ತಂಡಕ್ಕೆ ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿದ್ದೇನೆ. ಸರಿಯಾದ ಪಾಠ, ಸರಿಯಾದ ವೇದಿಕೆ ಸಿಕ್ಕಾಗ ನಾವು ಉನ್ನತ ಮಟ್ಟಕ್ಕೆ ಹೋಗಬಹುದು ಎನ್ನುವ ಭರವಸೆ ಮೂಡಿದೆ. ಯಶವಂತ ಆಚಾರ್ಯ ಕಬಡ್ಡಿ ಕ್ರೀಡಾಪಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net