

ಪಾಂಡವಪುರ: ರಾಜಕೀಯ ಜಂಜಾಟಗಳ ನಡುವೆಯೂ ಶಾಸಕ ಸಿ.ಎಸ್.ಪುಟ್ಟರಾಜು ಅಖಾಡಕ್ಕೆ ಇಳಿದು ತೊಡೆ ತಟ್ಟಿ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ತಾಲೂಕಿನ ಜಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿದ ಬಳಿಕ ಕಬಡ್ಡಿಪಟುಗಳ ಎದುರು ಇಳಿ ವಯಸ್ಸಿನಲ್ಲೂ ತೊಡೆ ತಟ್ಟಿದರು. ಬಹಳ ಜೋಷ್‌ನಿಂದಲೇ ಆಟವಾಡಿದ ಶಾಸಕರು, ಯಾವುದೇ ಅಂಕ ಗಳಿಸದಿದ್ದರೂ ಚುರುಕಾದ ಆಟದಿಂದ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕ್ರೀಡೆ ವಿಚಾರದಲ್ಲಿ ನಗರ ಪ್ರದೇಶದ ಮಕ್ಕಳಿಗೆ ಸಿಗುವ ಸವಲತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗುತ್ತಿಲ್ಲ. ಇದರಿಂದ ಬಹಳಷ್ಟು ಕ್ರೀಡಾಪಟುಗಳು ಸಾಧನೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲೂ ಕ್ರೀಡೆಗಳನ್ನು ಆಯೋಜಿಸಿ ಸಾಧನೆ ಮಾಡಲು ವೇದಿಕೆ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಬಾಲಕರ ವಿಭಾಗದ ಕಬಡ್ಡಿಯಲ್ಲಿ ಅಮೃತ ತಂಡ ಪ್ರಥಮ, ಜಕ್ಕನಹಳ್ಳಿಯ ಅಪ್ಪು ತಂಡ ದ್ವಿತೀಯ ಬಹುಮಾನ ಗಳಿಸಿಕೊಂಡಿತು. ಬಾಲಕಿಯರ ವಿಭಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಥಮ, ಓಬವ್ವ ತಂಡ ದ್ವಿತೀಯ ಸ್ಥಾನ ಗಳಿಸಿ ಬಹುಮಾನ ಪಡೆದುಕೊಂಡವು.
ಇದೇ ವೇಳೆ ಜಕ್ಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಗುಣಶ್ರಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ತಾಪಂ ಇಒ ಲೋಕೇಶ್‌ಮೂರ್ತಿ, ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷ ಕೆಂಪೇಗೌಡ, ಸದಸ್ಯರಾದ ಲೋಕೇಶ್, ದಿವಾಕರ್, ದಾಸೇಗೌಡ, ಪಿಡಿಒ ಸುರೇಶ್ ಇದ್ದರು.