

ಮದ್ದೂರು: ತೆಂಗು ಬೆಳೆಗೆ ಆವರಿಸುತ್ತಿರುವ ಕಪ್ಪು ತಲೆ ಹುಳು ಬಾಧೆ ತಡೆಗೆ ಮದ್ದೂರು ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ವಿ.ಸಿ. ಫಾರಂ ಮಂಡ್ಯ ಜಂಟಿಯಾಗಿ ಪರಿಸರ ಸ್ನೇಹಿ ಜೈವಿಕ ವಿಧಾನವನ್ನು ಕಂಡುಕೊಂಡಿದೆ.
ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ರೈತ ಸುರೇಂದ್ರ ಕುಮಾರ್ ಅವರ ತೆಂಗಿನ ತೋಟದಲ್ಲಿ ಕಪ್ಪು ತಲೆ ಹುಳು ನಿಯಂತ್ರಣ ಕ್ರಮಗಳ ಕುರಿತು ಬುಧವಾರ ಆಯೋಜಿಸಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು.
ಇದೇ ವೇಳೆ ರೈತರಿಗೆ ತೋಟಗಾರಿಕೆ ವಿಜ್ಞಾನಿ ಡಾ.ದಿವ್ಯಾ ಪರೋಪಜೀವಿಗಳನ್ನು ತೆಂಗಿನ ಮರಗಳಿಗೆ ಬಿಟ್ಟು ಕಪ್ಪು ತಲೆ ಹುಳು ಬಾಧೆಯನ್ನು ತಡೆಗಟ್ಟುವುದರ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಜಿಲ್ಲೆಯ ವಿವಿಧೆಡೆ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳುಗಳಿಂದ ಈಗಾಗಲೇ ಸಾಕಷ್ಟು ಹಾನಿಯುಂಟಾಗಿದ್ದು, ಇದು ಹೀಗೆ ಮುಂದುವರಿದಲ್ಲಿ ತೆಂಗಿನ ಬೆಳೆಯೇ ಸಂಪೂರ್ಣವಾಗಿ ನಶಿಸುವ ಸಾಧ್ಯತೆ ಇದೆ. ರಾಸಾಯನಿಕ ಸಿಂಪರಣೆ ಮಾಡಿ ಎಳನೀರು, ತೆಂಗಿನ ಕಾಯಿಗಳನ್ನು ಮಾರಾಟ ಮಾಡುವುದರಿಂದ ವಿವಿಧ ರೋಗಗಳು ಉಲ್ಬಣಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಪರಿಣಿತ ವಿಜ್ಞಾನಿಗಳು ಸೇರಿ ಕಪ್ಪು ತಲೆ ಹುಳು ಬಾಧೆಯನ್ನು ನಿಯಂತ್ರಿಸಲು ಸಂಶೋಧನಾ ಕೇಂದ್ರಗಳಲ್ಲಿ ಪರೋಪಜೀವಿಗಳನ್ನು ಬಳಸುವ ಜೈವಿಕ ವಿಧಾನವನ್ನು ಕಂಡು ಕೊಂಡಿದ್ದು, ಇದರ ಬಳಸುವಿಕೆಯ ಬಗ್ಗೆ ರೈತರಿಗೆ ಆರಿವು ಮೂಡಿಸಬೇಕಿದೆ ಎಂದರು.
ತಾಲೂಕು ತೊಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ, ಸಹಾಯಕ ತೋಟಗಾರಿಕೆ ಅಧಿಕಾರಿ ಡಾ. ಶಿವಪ್ರಸಾದ್, ನಿತಿನ್, ಪ್ರಯೋಗಾಲಯ ಅಧಿಕಾರಿ ಹನುಮಂತು, ಸಹಾಯಕ ಅಧಿಕಾರಿ ಅಶ್ವಿನಿ ಮತ್ತಿತರರು ಇದ್ದರು.