

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡದಲ್ಲಿರುವ ಚಿನ್ನ ಮತ್ತು ಅದಿರಿನ ಮೇಲೆ ಕಣ್ಣಿಟ್ಟಿರುವ ಗಣಿ ಕುಳಗಳು ಕೊಳ್ಳೆ ಹೊಡೆಯಲು ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಇದಕ್ಕಾಗಿ ಕಪ್ಪತಗುಡ್ಡಕ್ಕೆ ನೀಡಲಾಗಿರುವ ವನ್ಯಜೀವಿಧಾಮದ ಸ್ಥಾನಮಾನ ಹಿಂಪಡೆಯುವಂತೆ ಲಾಬಿ ನಡೆಸಿದ್ದಾರೆ. ಕೆಲ ಪ್ರಭಾವಿಗಳು ಇದಕ್ಕೆ ಕೈಜೋಡಿಸಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.
ಬೆಂಗಳೂರಿನಲ್ಲಿ ಮೂವರು ಸಚಿವರು, ಇಬ್ಬರು ಶಾಸಕರು, ಸಂಸದರು ಹಾಗೂ ಜಿಲ್ಲೆಯ ಪ್ರಭಾವಿ ವ್ಯಕ್ತಿಗಳು ಸಭೆ ಸೇರಿ ಕಪ್ಪತಗುಡ್ಡದ ವನ್ಯಜೀವಿಧಾಮ ಸ್ಥಾನಮಾನ ಹಿಂಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ರ್ಚಚಿಸಿದ್ದಾರೆ. ಸಭೆಯಲ್ಲಿ ನಡೆದಿರುವ ಚರ್ಚೆ ಮತ್ತು ತೀರ್ವನವನ್ನು ಮುಖ್ಯಮಂತ್ರಿ ಬಳಿ ಕೊಂಡೊಯ್ದು ಒತ್ತಡ ಹೇರುವ ತಂತ್ರಗಾರಿಕೆ ನಡೆದಿದೆ ಎಂಬ ಮಾತು ಕೇಳಿಬಂದಿದೆ. ಇದರ ಜತೆಗೆ ಅದೇ ದಿನ ಗಣಿಗಾರಿಕೆ ಮಾಡಲು ಯತ್ನಿಸುತ್ತಿರುವ ಕಂಪನಿ ಮುಖ್ಯಸ್ಥರು ಸಹ ಕಪ್ಪತಗುಡ್ಡಕ್ಕೆ ತೆರಳಿ ಪರಿಶೀಲನೆ ನಡೆಸಿರುವುದರಿಂದ ಆರೋಪಕ್ಕೆ ಪುಷ್ಟಿ ದೊರೆತಂತಾಗಿದೆ.
ಮಾ. 9ರಂದು ಜರುಗಿದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸಭೆಯ ಅಜೆಂಡಾದಲ್ಲಿ ಕಪ್ಪತಗುಡ್ಡ ವನ್ಯಜೀವಿಧಾಮ ವಿಷಯ ಸೇರ್ಪಡೆಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ಅರಣ್ಯ ಸಚಿವ ಆನಂದ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರಾದರೂ ಸಭೆಯಲ್ಲಿ ಕಪ್ಪತಗುಡ್ಡ ಕುರಿತು ಚರ್ಚೆ ನಡೆಯದಿರುವುದರಿಂದ ಜಿಲ್ಲೆಯ ಜನರು ನೆಮ್ಮದಿ ನಿಟ್ಟಿಸಿರು ಬಿಡುವಂತಾಗಿತ್ತು.
ಇನ್ನಿಲ್ಲದ ಒತ್ತಡ:
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಕಪ್ಪತಗುಡ್ಡಕ್ಕೆ ನೀಡಲಾಗಿರುವ ವನ್ಯಜೀವಿ ಧಾಮದ ಸ್ಥಾನಮಾನ ರದ್ದುಗೊಳಿಸಬೇಕೆಂದು ಗಣಿ ಕುಳಗಳು ಸರ್ಕಾರದ ಮಟ್ಟದಲ್ಲಿ ಅನೇಕ ತಿಂಗಳುಗಳಿಂದ ಇನ್ನಿಲ್ಲದ ಒತ್ತಡ ಹೇರಲಾಂಭಿಸಿದ್ದಾರೆ. ಕಪ್ಪತಗುಡ್ಡವು ವನ್ಯಜೀವಿಧಾಮವಾಗಿ ಮುಂದುವರಿದರೆ ರೈತರನ್ನು ಒಕ್ಕಲೆಬ್ಬಿಸಲಾಗುವುದು ಎಂದು ರೈತರನ್ನು ಪ್ರಚೋದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೃತ್ಯ ಸ್ಥಳೀಯ ಮಟ್ಟದಲ್ಲಿಯೂ ನಡೆದಿದೆ.
ಕಪ್ಪತಗುಡ್ಡ ವನ್ಯಜೀವಿ ಧಾಮವಾದರೆ ಗುಡ್ಡದ ಸೆರಗಿನಲ್ಲಿ ಬರುವ ಜಮೀನುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲಿದೆ. ವನ್ಯಜೀವಿಧಾಮ ಕಾಯ್ದೆ ಅನುಷ್ಠಾನಗೊಂಡರೆ ಇಲ್ಲಿನ ರೈತರ ಕತೆ ಮುಗಿದಂತೆ ಎಂದು ರೈತರಲ್ಲಿ ಭೀತಿ ಹುಟ್ಟಿಸಿ, ಅವರನ್ನು ಎತ್ತಿಕಟ್ಟುವ ಕೆಲಸ ನಿತ್ಯವೂ ನಡೆಯುತ್ತಿದೆ. ತೆರೆಮರೆಯಲ್ಲಿ ನಿಂತುಕೊಂಡು ರೈತರಿಂದ ಪ್ರತಿಭಟನೆ ಮಾಡಿಸಲಾಗುತ್ತಿದ್ದು, ಗುಡ್ಡದ ಸೆರಗಿನ ಕೆಲ ಗ್ರಾಮಗಳ ಮುಖಂಡರು ಗಣಿ ಕುಳಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.
ಗುಡ್ಡದ ಸೆರಗಿನಲ್ಲಿ ಶಾಸಕರ ಕ್ವಾರಿಗಳು
ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡದ ಸೆರಗಿನಲ್ಲಿ ಕಲ್ಲಿನ ಕ್ವಾರಿ ನಡೆಸುತ್ತಿರುವ ಕೆಲ ಹಾಲಿ ಶಾಸಕರು, ಮಾಜಿ ಶಾಸಕರು ಸಹ ಕಪ್ಪತಗುಡ್ಡ ವನ್ಯಜೀವಿ ಧಾಮದ ಆದೇಶವನ್ನು ರದ್ದು ಮಾಡಬೇಕೆಂದು ಪರೋಕ್ಷವಾಗಿ ಪ್ರಯತ್ನ ನಡೆಸಿದ್ದಾರೆ. ಜನರನ್ನು ಎತ್ತಿಕಟ್ಟಿ ಅವರಿಂದ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಲಾರಂಭಿಸಿದೆ. ಕಪ್ಪತಗುಡ್ಡವು ವನ್ಯಜೀವಿಧಾಮವಾಗಿ ಮುಂದುವರಿದರೆ ಸ್ಥಳೀಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಕೆಟ್ಟ ಹೆಸರು ತಂದುಕೊಳ್ಳಬಾರದು ಎಂದು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ನಡೆಯುತ್ತಿದೆ. ಸದ್ಯ ಕಪ್ಪತಗುಡ್ಡ ನಿಷಿದ್ಧ ಪ್ರದೇಶ. ಅನುಮತಿ ಇಲ್ಲದೆ ಕಾಲಿಡಲೂ ಆಗದಂತಹ ಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಧಾಮದ ಸುತ್ತಮುತ್ತಲಿನ ಇಂತಿಷ್ಟು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ. ಹೀಗಾಗಿ, ಗುಡ್ಡದ ಸೆರಗಿನಲ್ಲಿರುವ ಕಲ್ಲು ಗಣಿಗಾರಿಕೆಯ ಕ್ರಷರ್ಗಳನ್ನು ಬಂದ್ ಮಾಡುವಂತಹ ಪ್ರಸಂಗ ಎದುರಾಗಬಹುದು ಎಂಬ ಆತಂಕ ಮನೆ ಮಾಡಿದೆ. ಇದಕ್ಕಾಗಿ ಗಣಿ ಕುಳಗಳ ಜತೆಗೆ ಕ್ರಷರ್ ಕಿಂಗ್ಗಳು ಸೇರಿಕೊಂಡು ಲಾಬಿ ಮಾಡುತ್ತಿದ್ದಾರೆ.
ಹಿನ್ನೆಲೆ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (2016) ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೊಷಿಸಿ ಕೆಲ ತಿಂಗಳು ನಂತರ ಆದೇಶವನ್ನು ವಾಪಸ್ ಪಡೆಯಲಾಗಿತ್ತು. ಸರ್ಕಾರದ ನಡೆಯನ್ನು ಖಂಡಿಸಿ ಸಾಕಷ್ಟು ಹೋರಾಟಗಳು ನಡೆದವು. ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರವು (2017) ಮತ್ತೆ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೊಷಣೆ ಮಾಡಿತು. ಮೇ 16, 2019ರಂದು ಕಪ್ಪತಗುಡ್ಡ ವನ್ಯಜೀವಿ ಧಾಮ ಎಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ವನ್ಯಜೀವಿ ಧಾಮವಾಗಿ ಘೊಷಿಸಿ ಆದೇಶ ಹೊರಡಿಸಿತ್ತು.
ಕಪ್ಪತಗುಡ್ಡ ರಕ್ಷಣೆ ಮಾಡುವುದು ನಮ್ಮ ಪ್ರಥಮ ಆದ್ಯತೆ. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಹೋರಾಟದ ಫಲದಿಂದ ಕಪ್ಪತಗುಡ್ಡ ಉಳಿದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಕರೊನಾ ವೈರಸ್ ಹಾವಳಿಯಿಂದ ಕುಸಿದಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇಂತಹ ಅನ್ಯಮಾರ್ಗ ಹುಡುಕಬಾರದು. ಪ್ರಕೃತಿ ಮೇಲೆ ದಾಳಿ ಮಾಡುವಂತಹ ಕ್ರಮಗಳನ್ನು ತೆಗೆದುಕೊಳ್ಳಬಾರದು. ಜಿಲ್ಲೆಯ ಜನರ ಆಶಯದ ವಿರುದ್ಧ ನಿರ್ಣಯ ಕೈಗೊಂಡರೆ ಜನಾಂದೋಲನ ರೂಪಿಸುವುದರ ಜತೆಗೆ ಕಾನೂನು ಹೋರಾಟ ಮಾಡಲು ಸಹ ಹಿಂಜರಿಯುವುದಿಲ್ಲ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯಮಠ ಗದಗ
EndFragment