ಕಪ್ಪತಗುಡ್ಡಕ್ಕೆ ಪ್ರವಾಸಿಗರ ದಂಡು

kappataguda
Published on

ವಿಜಯ ಸೊರಟೂರ ಡಂಬಳ

ಉತ್ತರ ಕರ್ನಾಟಕ ಸಹ್ಯಾದ್ರಿ ಎಂದೇ ಕರೆಯಿಸಿ ಕೊಂಡಿರುವ ಕಪ್ಪತಗಿರಿ ಹಸಿರು ಹೊನ್ನಿನಿಂದ ಮೈದುಂಬಿಕೊಂಡಿದೆ. ಮುಂಗಾರು ಮಳೆಯಿಂದಾಗಿ ಕಂಗೊಳಿಸುತ್ತಿದೆ. ‘ಎಪ್ಪತ್ತು ಗುಡ್ಡಕ್ಕಿಂತ ಕಪ್ಪತಗುಡ್ಡ ನೋಡು’ ಎಂಬ ನಾಣ್ಣುಡಿಯಂತೆ ಕಪ್ಪತಗುಡ್ಡದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಗದಗ, ಮುಂಡರಗಿ, ಶಿರಹಟ್ಟಿ ತಾಲೂಕಿನಾದ್ಯಂತ 24,415.73 ಹೆಕ್ಟೇರ್ ಪ್ರದೇಶದ ಗುಡ್ಡವನ್ನು ಸರ್ಕಾರ ವನ್ಯಜೀವಿಧಾಮ ಎಂದು ಘೊಷಿಸಿದೆ. ಸಾವಿರಾರು ಔಷಧೀಯ ಸಸ್ಯ ಪ್ರಭೇದಗಳನ್ನು ಹೊಂದಿರುವ ಕರ್ನಾಟಕದ ಏಕೈಕ ತಾಣವಿದು.

ಪ್ರತಿವರ್ಷ ಜೂನ್​ನಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಕವಲು ದಾರಿಯಲ್ಲಿ ಬೆಟ್ಟ, ಗುಡ್ಡವನ್ನೇರಿ ಚಾರಣದ ಆನಂದ ಅನುಭವಿಸಲು ಸಹಸ್ರಾರು ಜನರು ಇಲ್ಲಿಗೆ ಬರುತ್ತಾರೆ. ಕಪ್ಪತಗುಡ್ಡದೊಂದಿಗೆ ಈ ಭಾಗದ ಗ್ರಾಮಸ್ಥರು, ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟೆ, ಹಾವೇರಿ ಜಿಲ್ಲೆ ಹಾಗೂ ವಿವಿಧ ರಾಜ್ಯದ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ನಗರಗಳಿಂದ ಬೈಕ್, ಕಾರು, ಆಟೋ ಮೂಲಕ ಆಗಮಿಸಿ ಕಪ್ಪತಗಿರಿಯನ್ನು ನೋಡಿ ಆನಂದಿಸುತ್ತಿದ್ದಾರೆ.

ಕೆರೆಗಳು ಭರ್ತಿ: ಕಪ್ಪತಗುಡ್ಡದೊಳಗೆ ಅರಣ್ಯ ಇಲಾಖೆಯಿಂದ ನಿರ್ವಿುಸಿದ ಚೆಕ್​ಡ್ಯಾಂ, ಬಾಂದಾರ, ಕೆರೆಗಳು ಬೇಸಿಗೆಯಲ್ಲಿ ಬತ್ತಿದ್ದವು. ಮುಂಗಾರು ಮಳೆ ಯಿಂದ ಅಲ್ಪಸ್ವಲ್ಪ ಭರ್ತಿಯಾಗಿದ್ದು, ಇಲ್ಲಿ ರುವ ಪ್ರಾಣಿಗಳಿಗೆ ಆಸರೆಯಾಗಿವೆ. ಇಲ್ಲೀಗ ಸಮೃದ್ಧವಾಗಿ ಹುಲ್ಲು ಬೆಳೆದಿದೆ. ಅದನ್ನು ಅರಸಿ ರಾಯಭಾಗ, ಬೆಳಗಾವಿ, ಅಥಣಿ, ನಿಪ್ಪಾಣಿ, ಮುಧೋಳ ಮೊದಲಾದೆಡೆಯಿಂದ ಕುರಿಗಾಹಿಗಳು ಕುರಿ ಗಳೊಂದಿಗೆ ತಂಡೋಪತಂಡವಾಗಿ ಬರುತ್ತಿದ್ದಾರೆ.

ವಾರಾಂತ್ಯ ಸುರಿದ ಮಳೆಯಿಂದ ಕಪ್ಪತಗುಡ್ಡ ಈಗ ಸಂಪೂರ್ಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದನ್ನು ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ. ಕಪ್ಪತಗುಡ್ಡದ ವನ್ಯಜೀವಿ ಧಾಮ ಕೇಂದ್ರವಾಗಿರುವುದರಿಂದ ಗುಡ್ಡದೊಳಗೆ ಕುರಿಗಾಹಿಗಳಿಗೆ ಠಿಕಾಣಿ ಹೂಡಲು ಅನುಮತಿಯಿಲ್ಲ. ಕಪ್ಪತಗುಡ್ಡದಲ್ಲಿ ವನ್ಯಜೀವಿಗಳ ಬೇಟೆಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.|ಪ್ರದೀಪ ಪವಾರ ವಲಯ ಅರಣ್ಯಾಧಿಕಾರಿ

ಎಪ್ಪತ್ತು ಗಿರಿಗಿಂತ ಕಪ್ಪತಗಿರಿ ಮೇಲು ಎಂಬ ಸಾರಾಂಶ ಸ್ಕಂದ ಪುರಾಣದಲ್ಲಿವೆ. ಕಪ್ಪತಗಿರಿಯೊಳಗೆ ಇರುವ ಮಠಗಳಿಗೆ, ದೇವಾಲಯಗಳಿಗೆ ಈ ಭಾಗದ ಸಾವಿರಾರು ಭಕ್ತರು ಪ್ರತಿ ಅಮಾವಾಸ್ಯೆಗೆ ಬರುತ್ತಾರೆ. ಇದರೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಮಳೆಗಾಲದಲ್ಲಿ ಕಪ್ಪತಗುಡ್ಡ ಪ್ರವಾಸಿಗರನ್ನು ಸೆಳೆಯುತ್ತದೆ.| ಕಾರಿಸಿದ್ದಪ್ಪ ಅಜ್ಜ ಕಪ್ಪತ್ತಗುಡ್ಡ ಕಾರಿಸಿದ್ಧೇಶ್ವರ ದೇವಾಲಯದ ಪೂಜಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net