

ಚಾಮರಾಜನಗರ: ಕೊಳ್ಳೇಗಾಲ ತಾಲೂಕು ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘ ಕಳೆದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 34ನೇ ದಿನವಾದ ಶನಿವಾರವೂ ಮುಂದುವರಿದಿದೆ.
ಪಟ್ಟಣದ ಬಸ್ ಡಿಪೋ ರಸ್ತೆಯಲ್ಲಿರುವ ಕಬಿನಿ ಕಚೇರಿಯಲ್ಲಿ ಸಮಾವೇಶಗೊಂಡಿದ್ದ ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ತಲೆಗೆ ಕಪ್ಪುಪಟ್ಟಿ ಧರಿಸಿ ಅರೆ ಬೆತ್ತಲೆಯಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶಂಕ ನಾದ ಹಾಗೂ ತಮಟೆಯೊಂದಿಗೆ ಮೌನ ಮೆರವಣಿಗೆ ಸಾಗಿದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ಬಳಿಕ ಕಬಿನಿ ಕಚೇರಿಗೆ ತಲುಪಿದರು.
ತಾಲೂಕು ಗುಂಡಾಲ್ ಜಲಾಶಯದ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ ದಶರಥ ಮಾತನಾಡಿ, ಕಳೆದ 34ದಿನಗಳಿಂದ ಗುಂಡಾಲ್ ಜಲಾಶಯ 5100 ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರು ಕಬಿನಿ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಇರುವಷ್ಟೇ ಗುಂಡಾಲ್ ಜಲಾಶಯ ನೀರನ್ನು ನಮ್ಮ ರೈತರಿಗೆ ನೀಡಬೇಕು.
ಕೆರೆ, ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು, ಗಿಡಗಂಟಿ , ಕಲುಷಿತ ನೀರು ತೆರವುಗೊಳಿಸಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ, ಕಾಲುವೆಗಳ ಅಭಿವೃದ್ಧಿ ಮಾಡಿಲ್ಲ. ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಸೇರಿದ ಜಮೀನಿಗೆ ಮಾತ್ರ ಕಬಿನಿ, ಗುಂಡಾಲ್ ಜಲಾಶಯ ನೀರು ಹೋಗುವಂತೆ ಅಧಿಕಾರಿಗಳು ಮಾಡಿದ್ದಾರೆ. ರೈತರಿಗೆ ಗುಂಡಾಲ್ ಜಲಾಶಯ ನೀರು ಬಿಡಬೇಕು ಎಂದು ಮಾನವ ಹಕ್ಕುಗಳ ಆಯೋಗ ಆದೇಶ ಮಾಡಿದ್ದರೂ ಅಧಿಕಾರಿಗಳು ಇದನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿದರು.
ಸಂಘದ ಕಾರ್ಯದರ್ಶಿ ರಾಮಕೃಷ್ಣ, ವೀರಭದ್ರಸ್ವಾಮಿ ಸರಗೂರು, ಹಿತ್ತಲದೊಡ್ಡಿ ನಾಗರಾಜು, ಮಲ್ಲರಾಜು, ಮೋಳೆ ರಾಜಣ್ಣ, ಮಧುವನಹಳ್ಳಿ ಬಸವರಾಜು, ಮೈಸೂರು ವಿಭಾಗದ ಸಮತ ಸೈನಿಕ ದಳ ಪ್ರಧಾನ ಕಾರ್ಯದರ್ಶಿ ಮುರುಳಿಧರ, ನಗರಸಭೆ ಸದಸ್ಯೆ ಜಯಮೇರಿ, ಮಾಜಿ ಸದಸ್ಯ ನರಸಿಂಹ, ಚಿನ್ನಸ್ಚಾಮಿ ಮಾಳಿಗೆ, ಮಾಲಂಗಿ ರೇಚಣ್ಣಸ್ವಾಮಿ, ಮೋಳೆ ಸೋಮಣ್ಣ, ಚೆಲುವನಹಳ್ಳಿ ಮಲ್ಲಿಕಾರ್ಜುನ, ಬಸವರಾಜಪ್ಪ, ಜಗದೀಶ್, ಮೊಳೆ ಮಹದೇವ, ರವಿ ಅಣಗಳ್ಳಿ, ಲಕ್ಷ್ಮಣ್ ದಾಸ್ ಇದ್ದರು.