

ಬೆಳಗಾವಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಮಾಡಿರುವುದನ್ನು ಖಂಡಿಸಿ ಶ್ರೀರಾಮಸೇನೆ, ಬಜರಂಗ ದಳ ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಕನ್ಹಯ್ಯ ಲಾಲ್ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಕನ್ಹಯ್ಯಲಾಲ್ ಹತ್ಯೆ ಮಾನವತೆಗೆ ಮಾಡಿದ ದೊಡ್ಡ ಅಪಮಾನ. ಅಂಗಡಿಗೆ ನುಗ್ಗಿ ಹತ್ಯೆಗೈದಿರುವುದು ಖಂಡನೀಯ. ಇದೇ ರೀತಿ ಪ್ರಧಾನಮಂತ್ರಿ ಅವರನ್ನೂ ಹತ್ಯೆಗೈಯುವುದಾಗಿಯೂ ಹಂತಕರು ಹೇಳಿದ್ದಾನೆ. ಒಬ್ಬ ಮನುಷ್ಯನನ್ನು ಹತ್ಯೆಗೈಯುವಂತೆ ಯಾವ ಧರ್ಮವೂ ಹೇಳಿಲ್ಲ. ಈ ಹಂತಕ ಹಿಂದೂನೂ ಅಲ್ಲ, ಮುಸ್ಲಿಮನೂ ಅಲ್ಲ. ಆತನೊಬ್ಬ ಜಿಹಾದಿ. ಆತನಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ನೂಪುರ್ ಶರ್ಮಾ ಹೇಳಿಕೆ ನೀಡಿದ ನಂತರ ಕರ್ನಾಟಕದಲ್ಲಿ ಹಲವರು ರಸ್ತೆಗಿಳಿದು ಪ್ರತಿಭಟಿಸಿದರು. ಆದರೆ, ಹಿಂದು ವ್ಯಕ್ತಿಯ ಹತ್ಯೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ನಮ್ಮ ದೇಶಭಕ್ತಿ ಎಷ್ಟು ಪ್ರಾಮಾಣಿಕತೆಯಿಂದ ಕೂಡಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಚುನಾವಣೆ ಬಂದಾಗ ಎಲ್ಲ ಪಕ್ಷಗಳು ರಾಜಕೀಯ ಮಾಡಲಿ. ಆದರೆ, ಈಗ ಈ ರೀತಿ ವರ್ತಿಸುವುದು ಸರಿಯಲ್ಲ ಎಂದರು. ನೀವು ನಿಜವಾದ ಭಾರತೀಯರಾಗಿದ್ದರೆ ಉದಯಪುರ ಘಟನೆ ಖಂಡಿಸಿ. ಇದನ್ನು ಖಂಡಿಸದವರು ನಾಲಾಯಕ್ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಮೊದಲು ನಾವೆಲ್ಲರೂ ಭಾರತೀಯರು ಎಂಬುದನ್ನು ಎಲ್ಲ ಪಕ್ಷದವರು ಅರ್ಥೈಸಿಕೊಳ್ಳಬೇಕು ಎಂದರು. ವಿಶ್ವಹಿಂದು ಪರಿಷತ್‌ನ ಕೃಷ್ಣಭಟ್ ಮಾತನಾಡಿ, ದೇಶದಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಪಡೆದು, ಈ ನೆಲದ ಕಾನೂನುಗಳನ್ನು ಮುರಿಯುತ್ತಿರುವ ಮನಸ್ಥಿತಿಗಳನ್ನು ಖಂಡಿಸುತ್ತೇವೆ. ಹಿಂದುಗಳನ್ನು ಕೊಲ್ಲುತ್ತೇವೆ ಎನ್ನುವ ಜಿಹಾದಿಗಳ ಹುಟ್ಟಡಗಿಸಬೇಕಿದೆ ಎಂದರು. ಸಂಸದೆ ಮಂಗಲ ಅಂಗಡಿ, ರವಿಕುಮಾರ ಕೋಕಿತಕರ, ಉಜ್ವಲಾ ಬಡವನಾಚೆ, ಕಿರಣ ಜಾಧವ, ವಿಜಯ ಜಾಧವ, ಸೋನಾಲಿ ಸರ್ನೋಬತ್, ಡಾ.ಬಸವರಾಜ ಭಾಗೋಜಿ ಇತರರು ನೇತೃತ್ವ ವಹಿಸಿದ್ದರು.