

ಮಹದೇಶ್ವರಬೆಟ್ಟ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಮ್ಮಿಕೊಂಡಿದ್ದ ಕನ್ನಡೋತ್ಸವ ಯಾತ್ರೆಗೆ ಬುಧವಾರ ಮಲೆಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಲಾಯಿತು.
ಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿ, ಕರ್ನಾಟಕ ಪರಂಪರೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ 13 ದಿನಗಳ ಕಾಲ ಕನ್ನಡ ಉತ್ಸವ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಕವಿಗಳು, ಸಾಹಿತಿಗಳು ಹಾಗೂ ದಾರ್ಶನಿಕರ ಕರ್ಮಭೂಮಿಗೆ ತೆರಳಿ ನಮನ ಅರ್ಪಿಸಲಾಗುವುದು. ಸಾಧ್ಯವಾದ ಕಡೆಗಳಲ್ಲಿ ಗಾಯನ, ವಾಚನದ ಮೂಲಕ ಕರ್ನಾಟಕದ ಪರಂಪರೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಜತೆಗೆ ಅದರ ಬೆಳಕಿನಲ್ಲಿ ವರ್ತಮಾನದ ಮೌಲ್ಯಾಧಾರಿತ ಸಮಾಜವನ್ನು ಕಟ್ಟಿ ಬೆಳೆಸಲಾಗುವುದು ಎಂದು ಹೇಳಿದರು.
ಸಾಕಷ್ಟು ಸಂಪತ್ತು, ಸಮೃದ್ಧಿಯಿಂದ ಕೂಡಿರುವ ರಾಜ್ಯದಲ್ಲಿ ಈಗಲೂ ಬಡತನ, ನಿರುದ್ಯೋಗ, ಅಸಮಾನತೆ, ಮೋಸ ಹಾಗೂ ಅಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ನಿಜಕ್ಕೂ ಕನ್ನಡಿಗರಿಗೆ ಆದ ಅಪಮಾನ. ನಿಜವಾದ ಕನ್ನಡ ದ್ರೋಹಿಗಳೆಂದರೆ ನ್ಯಾಯ ನೀತಿ ಇಲ್ಲದವರು, ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಹಾಗೂ ಮೋಸಗಾರರು. ಬದಲಾವಣೆ ತರುವ ನಿಟ್ಟಿನಲ್ಲಿ ಸಮಿತಿಯು 3 ವರ್ಷದಿಂದ ಹೋರಾಟ ನಡೆಸುತ್ತಿದ್ದು, ರಾಜ್ಯದ ಜನರಲ್ಲಿ ಚೈತನ್ಯ ಮೂಡಿಸುವಂತ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ಸೋಮಸುಂದರ್, ಜಿಲ್ಲಾಧ್ಯಕ್ಷ ಶ್ರೀನಿವಾಸ ಶಾಸ್ತ್ರಿ, ಜಂಟಿ ಕಾರ್ಯದರ್ಶಿ ಗಂಗಾಧರ್ ತರೀಕೆರೆ, ಗಿರೀಶ್ ಹಾಗೂ ಇನ್ನಿತರರು ಇದ್ದರು