

ಮೈಸೂರು: ಕರ್ನಾಟಕದಲ್ಲಿ ವಾಸ ಮಾಡುವ ಕನ್ನಡೇತರರು ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂದು ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಆಗ್ರಹಿಸಿದರು.
ಮೈಸೂರಿನ ನೋಟು ಮುದ್ರಣಾಲಯದ ಕನ್ನಡ ರಾಜ್ಯೋತ್ಸವ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ನಾಡು ಸೌಹಾರ್ದತೆಯ ಬೀಡು. ಇಲ್ಲಿನ ಜನ ಸಹೃದಯ ಉಳ್ಳವರಾಗಿದ್ದು, ಇತರರನ್ನು ಆತ್ಮೀಯವಾಗಿ ಅಪ್ಪಿಕೊಳ್ಳುವುದರ ಜತೆಗೆ ಸಹಾಯ ಹಸ್ತವನ್ನೂ ಚಾಚುತ್ತಾರೆ. ಇಲ್ಲಿ ಕೆಲಸ ಮಾಡುವ ಕನ್ನಡೇತರರು ಕನ್ನಡಿಗರ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಅವರೊಡನೆ ಸ್ನೇಹದಿಂದಿದ್ದು ಕೆಲಸ ಮಾಡಬೇಕು ಎಂದರು.
ಕನ್ನಡ ಏಕೀಕರಣ ಚಳವಳಿಗೆ ಆರು ದಶಕಗಳಿಗೂ ಹೆಚ್ಚು ಕಾಲದ ಇತಿಹಾಸವಿದೆ. ಏಕೀಕರಣಕ್ಕಾಗಿ ಹೋರಾಡಿದ ಅನೇಕ ಮಹನೀಯರು ತಮ್ಮ ತನು, ಮನ, ಧನ ಎಲ್ಲವನ್ನೂ ಅರ್ಪಿಸಿದ್ದಾರೆ.
ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ತಮ್ಮ ಸುಖ, ಶಾಂತಿ, ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಅಂತಹ ಅನೇಕ ಮಹಾತ್ಮರ ತ್ಯಾಗದಿಂದ ಇಂದು ಕರ್ನಾಟಕದ ಜನತೆ ನೆಮ್ಮದಿಯಿಂದ ಬದುಕುವಂತಾಗಿದೆ. ಅವರ ಋಣ ತೀರಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು
ಯುವ ಪೀಳಿಗೆ ಕನ್ನಡವನ್ನು ಅಪ್ಪಿ ಒಪ್ಪಿಕೊಂಡು ಅದಕ್ಕೆ ಗೌರವ ಸಲ್ಲಿಸಬೇಕಾಗಿದೆ. ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕಾಗಿದೆ.
ಕೇವಲ ನವೆಂಬರ್‌ನಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಕೈತೊಳೆದುಕೊಳ್ಳದೇ ನಾವೆಲ್ಲರೂ ಜೀವನದ ಪ್ರತಿಕ್ಷಣ ಕನ್ನಡಕ್ಕಾಗಿ ಮಿಡಿಯಬೇಕಾಗಿದೆ. ಹಾಗಾದಾಗ ಮಾತ್ರ ನಮ್ಮ ಹಿರಿಯರ ಹೋರಾಟಕ್ಕೆ ಅರ್ಥ ಬಂದಂತಾಗುತ್ತದೆ ಎಂದರು.
ನೋಟು ಮುದ್ರಣಾಲಯದ ಡಿಜಿಎಂ ಎಲ್.ರವಿ, ಅಧಿಕಾರಿಗಳಾದ ಜೋಗರೆಡ್ಡಿ, ಪ್ರಭುಕುಮಾರ್, ವೆಂಕಟರಮಣ, ಸಿಬ್ಬಂದಿ ರಾಜಣ್ಣ, ರವಿ ಸರಗೂರು, ಯುವಕವಿ ಶಿಶಿರಂಜನ್, ಸವಿತಾ ಹಾಗೂ ನೋಟು ಮುದ್ರಣಾಲಯದ ಸಿಬ್ಬಂದಿ, ಅವರ ಕುಟುಂಬ ಸದಸ್ಯರು ಹಾಜರಿದ್ದರು.