

ಮೈಸೂರು: ಚದುರಿ ಹೋಗಿದ್ದ ಕನ್ನಡ ಮಾತನಾಡುವವರನ್ನು ಒಗ್ಗೂಡಿಸಿದ ನವೆಂಬರ್ 1ರಂದು ನಾಡಿನಾದ್ಯಂತ ರಾಜ್ಯೋತ್ಸವ ಆಚರಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು.
ನಗರದ ಮಾಧವರಾವ್ (ಅಗ್ರಹಾರ) ವೃತ್ತದಲ್ಲಿ ಕರ್ನಾಟಕ ಸೇನಾ ಪಡೆಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಸಂಸ್ಕೃತಿ, ಪರಂಪರೆ ಹೊಂದಿರುವ ಕನ್ನಡ ಮಾತನಾಡುವವರು ಇದ್ದರೂ ಒಗ್ಗೂಡದೆ ಅಲ್ಲಲ್ಲಿ ಚದುರಿ ಹೋಗಿದ್ದರು. ಅವರೆಲ್ಲರನ್ನೂ ಒಕ್ಕೂಟ ವ್ಯವಸ್ಥೆಯಲ್ಲಿ ಒಂದುಗೂಡಿಸಿದ ದಿನ ಇದಾಗಿದೆ ಎಂದರು.ರಾಜ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಎಲ್ಲೆಡೆ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.ಪುನೀತ್ ಅವರು ಅಕಾಲಿಕವಾಗಿ ನಮ್ಮನ್ನಗಲಿದ್ದರೂ ತಮ್ಮ ಸಿನಿ ಪಯಣದಲ್ಲಿ ಅಪಾರ ಕೊಡುಗೆ ಜತೆಗೆ, ಅಪಾರ ಜನಸೇವೆಯನ್ನೂ ಮಾಡಿದ್ದಾರೆ. ಒಂದು ಕಡೆ ನಮಗೆ ಅವರಿಲ್ಲದಿರುವುದು ನೋವಾದರೂ ಇನ್ನೊಂದು ಕಡೆ ಅವರ ಜೀವನೋತ್ಸಾಹ ಎಲ್ಲರಿಗೂ ಸ್ಫೂರ್ತಿ ಆಗಬೇಕು. ಅದಕ್ಕಾಗಿ ಅವರ ಹುಟ್ಟುಹಬ್ಬವನ್ನು ಸ್ಫೂರ್ತಿಯ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಪುರಾತನ ಭಾಷೆಯಾದ ನಮ್ಮ ಕನ್ನಡ ಬಳಕೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಆದ್ದರಿಂದ ಕನ್ನಡವನ್ನು ಎಲ್ಲರೂ ಹೆಚ್ಚೆಚ್ಚು ಬಳಸಬೇಕು ಎಂದು ಕೋರಿದರು.
ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್. ಮಂಜೇಗೌಡ ಅವರು ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸಾರ್ವಜನಿಕರಿಗೆ ಕನ್ನಡ ಬಾವುಟ ವಿತರಿಸಿದರು. ಡಾ.ಬಿ.ಆರ್.ನಟರಾಜ್ ಜೋಯ್ಸ್ ಅವರು ಸಾರ್ವಜನಿಕರಿಗೆ ಸಿಹಿ ವಿತರಿಸಿದರು.
ಸಮಾಜ ಸೇವಕರಾದ ರಘುರಾಂ ಕೆ.ವಾಜಪೇಯಿ, ಬಿ.ಆರ್. ನಂದೀಶ್‌ಕುಮಾರ್, ಗೋಲ್ಡ್ ಸುರೇಶ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸಂಘಟನೆಯ ಸಿ.ಎಚ್.ಕೃಷ್ಣಯ್ಯ (ಕೃಷ್ಣಪ್ಪ ), ಪ್ರಭಾಕರ, ಮೊಗಣ್ಣಾಚಾರ್, ವಿಜಯೇಂದ್ರ, ಕುಮಾರ್, ಅಂಬಾ ಅರಸ್, ಜ್ಯೋತಿ, ಮಹಾದೇವ, ಬಂಗಾರಪ್ಪ, ದರ್ಶನ್‌ಗೌಡ, ದಿಲೀಪ್, ಸ್ವಾಮಿ, ಗೊರೂರು ಮಲ್ಲೇಶ್, ರಾಧಾಕೃಷ್ಣ, ಸಿದ್ದರಾಜು, ಗಣೇಶ್‌ಪ್ರಸಾದ್, ಗುಂಡ್ಲುಪೇಟೆ ಸಂತೋಷ್ ಇತರರು ಇದ್ದರು.