

ಸಿರಿಗೇರಿ: ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಹೇಳಿಕೆ ಖಂಡನೀಯ ಎಂದು ನಿಮಗಾಗಿ ನಾವು ಸಂಸ್ಥೆಯ ಗೌರವಾಧ್ಯಕ್ಷ ವಿ.ಹನುಮೇಶ್ ಹೇಳಿದರು.
ತಹಸೀಲ್ದಾರ್‌ಗೆ ಬರೆದ ಮನವಿಯನ್ನು ಗ್ರಾಮ ಆಡಳಿತಾಧಿಕಾರಿ ಶಿವಪುತ್ರಪ್ಪಗೆ ಸಲ್ಲಿಸಿ ಸೋಮವಾರ ಮಾತನಾಡಿದರು. ಕನ್ನಡ ಭಾಷೆ, ನೆಲ-ಜಲಕ್ಕಾಗಿ ಧೀಮಂತ ನಾಯಕರು ಹೋರಾಟ ಮಾಡಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾದರೆ ಯಾರು ಕೂಡ ಸಹಿಸಲ್ಲ. ಕೂಡಲೇ ಕ್ಷಮೆಯಾಚಿಸಿ ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷ ಬಿ.ಪುನೀತ್ ಕುಮಾರ್ ಮಾತನಾಡಿ ಕನ್ನಡ ಪುರಾತನವಾದ ಇತಿಹಾಸ ಹೊಂದಿದೆ. ಶಾಸನಗಳು, ಗ್ರಂಥಗಳು, ಇತಿಹಾಸಕಾರರು ಹಾಗೂ ಕವಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಕಮಲ್ ಹಾಸನ್ ಚರ್ಚೆಗೆ ಬಂದರೆ ಕನ್ನಡದ ವಿದ್ವಾಂಸರು ತಕ್ಕ ಉತ್ತರ ನೀಡುತ್ತಾರೆ. ಆದರೆ, ಕಮಲ್ ಹಾಸನ್ ಕ್ಷಮೆ ಕೇಳದೆ ಉದ್ಧಟತನ ಮೆರೆದಿದ್ದಾರೆ. ಮಂಡುತನ, ಅಹಂ ಅನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಹಳ್ಳಿ ಮರದ ನಾಗರಾಜ, ಪ್ರಧಾನ ಕಾರ್ಯದರ್ಶಿ ಕೊಳ್ಳಿ ಶೇಖರ್, ಖಜಾಂಚಿ ಶಿವಾಜಿ ರಾವ್, ನಿರ್ದೇಶಕರಾದ ಆಲಂ ಬಾಷಾ,ವಕೀಲ ರಾಮ್ ಬಾಬು, ಎನ್ ಗಾದಿಲಿಂಗ, ತಿಪ್ಪೇಸ್ವಾಮಿ, ಗುಡಟ್ಟಿ ಹಂಸಪ್ಪ, ಕಲ್ಗುಡಿ ಪಂಪ, ಗಂಗಾಧರ್ ಇದ್ದರು.