

ಪಾಂಡವಪುರ: ತಾಲೂಕು ಆಡಳಿತದಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.
ಕನ್ನಡ ಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಸವಣ್ಣ, ಪಂಪ, ರನ್ನ, ಕುವೆಂಪು, ದ.ರಾ.ಬೇಂದ್ರೆಯಾದಿಯಾಗಿ ಕನ್ನಡ ನಾಡಲ್ಲಿ ಹುಟ್ಟಿದ ಅನೇಕ ಕವಿಗಳು, ಸಾಹಿತಿಗಳು ಹಾಗೂ ಮಹನೀಯರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ನಾವು ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಗ್ರಾಮಾಂತರ ಪ್ರದೇಶದ ಮಕ್ಕಳು ಮಾತೃ ಭಾಷೆಯ ಸೊಬಗನ್ನು ಅನುಭವಿಸುತ್ತಾರೆ. ಹೆತ್ತ ತಾಯಿಗೆ ಎಷ್ಟು ಗೌರವ ನೀಡುತ್ತೇವೆಯೋ ಅಷ್ಟೇ ಗೌರವವನ್ನು ಮಾತೃ ಭಾಷೆಗೂ ನೀಡಿದರೆ ರಾಜ್ಯೋತ್ಸವ ಸಾರ್ಥಕವಾಗುತ್ತದೆ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ನ.25, 26 ಮತ್ತು 27 ರಂದು ಮೂರು ದಿನಗಳ ಕಾಲ ಪುನೀತ್ ನಮನ ಕಾರ್ಯಕ್ರಮ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಪುನೀತ್ ಕುಟುಂಬದ ಎಲ್ಲ ಸದಸ್ಯರು ಭಾಗಿಯಾಗಲಿದ್ದಾರೆ. ಜತೆಗೆ 75ನೇ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ತಾಲೂಕಿನ ಸೀತಾಪುರ ಗ್ರಾಮದಲ್ಲಿ 5 ದಿನಗಳ ಕಾಲ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಎಲ್.ನಯನಾ, ಉಪತಹಸೀಲ್ದಾರ್ ವರುಣ್, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಸದಸ್ಯರಾದ ಶಿವಕುಮಾರ್, ಚಂದ್ರು, ಬಿಇಒ ಲೋಕೇಶ್, ಇಒ ಲೋಕೇಶ್ ಮೂರ್ತಿ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಇತರರು ಇದ್ದರು.