

ಮೈಸೂರು: ಮೈಸೂರು ಆರ್ಟ್ಸ್ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ 73ನೇ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕನ್ನಡಪರ ಚಳವಳಿಗಾರ ಮೈ.ನಾ.ಗೋಪಾಲಕೃಷ್ಣ ತಮ್ಮ ಅನುಭವ ಹಂಚಿಕೊಂಡರು.
ಜನಜಾಗೃತಿ ಮೂಡಿಸಲು ಅನೇಕ ಹೋರಾಟ ನಡೆಸಲಾಯಿತು. ಅದಕ್ಕೆ ಬಳುವಳಿಯಾಗಿ ಪೊಲೀಸರಿಂದ ಲಾಠಿಯ ರುಚಿ ಅನುಭವಿಸಬೇಕಾಯಿತು. ಸೈಕಲ್‌ಗೆ ತೆರಿಗೆ ರದ್ದು, ಕಾವೇರಿ ನದಿ ನೀರಿನ ವಿವಾದ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಚಳವಳಿ ನಡೆಸಲಾಯಿತು. ಕನ್ನಡ ಪರ ಹೋರಾಟ ಪ್ರತಿ ಮನೆ ಮತ್ತು ಮನಗಳಿಗೂ ವಿಸ್ತರಿಸಿ ಆಡಳಿತದಲ್ಲಿ ಎಲ್ಲ ಹಂತಗಳಲ್ಲೂ ಕನ್ನಡ ಬಳಕೆಯ ಅನುಷ್ಠಾನ, ಪ್ರಾಥಮಿಕ ಶಿಕ್ಷಣವು ಕನ್ನಡಲ್ಲೇ ಆಗಬೇಕೆಂದು ನಾಲ್ಕು ದಶಕಗಳ ಹಿಂದೆ ನಡೆಸಿದ ಹೋರಾಟವು ಫಲ ನೀಡಿದೆ ಎಂದರು.
ಇವರ ಸಹಪಾಠಿಗಳಾದ ಕನ್ನಡಪರ ಹೋರಾಟಗಾರ ತಾಯೂರು ವಿಠ್ಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ, ಚಂದ್ರಶೇಖರ್, ಹ.ಕೃ.ಅನಂತ ಹಾಗೂ ರಘುರಾಮ್ ವಾಜಪೇಯಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಾಲ್, ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ, ಸಂಚಾಲಕರಾದ ಶ್ರೀಕಂಠ ಮೂರ್ತಿ ಇದ್ದರು