

ಚಿಕ್ಕಮಗಳೂರು: ಕನ್ನಡ ಹೊನ್ನುಡಿ ದೇವಿಯನ್ನು ದೈನಂದಿನ ಚಟುವಟಿಕೆಯಲ್ಲಿ ಆರಾಧಿಸುವ ಹಾಗೂ ಪೂಜಿಸುವ ಪ್ರವೃತ್ತಿ ಬೆಳೆಸಿಕೊಂಡರೆ ಕನ್ನಡ ಭಾಷೆ ಸಮೃದ್ಧವಾಗಿ ಹರಡುವುದರಲ್ಲಿ ಸಂಶಯವಿಲ್ಲ ಎಂದು ಬಸವನಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಬಾಬುದ್ದೀನ್ ತಿಳಿಸಿದರು.
ನಗರದ ಗೌರಿಕಾಲುವೆ ಸಮೀಪ ಜೈ ಭಾರತಮಾತೆ ಆಟೋ ನಿಲ್ದಾಣದಲ್ಲಿ ಏರ್ಪಡಿಸಿದ್ಧ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಾಭಿವೃಧ್ದಿಗಾಗಿ ನಾಡಿನಾದ್ಯಂತ ಹಲವಾರು ದಾರ್ಶನಿಕರು, ಸಾಹಿತಿಗಳ ಸೇವೆಯಿಂದ ಭಾಷೆ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ತೇರನ್ನು ಎಳೆಯುವ ನಿಟ್ಟಿನಲ್ಲಿ ಯುವಸಮೂಹ ಸ್ವಯಂ ಭಾಗಿಯಾಗಿ ನಾಡಿನ ಉದ್ದಗಲಕ್ಕೂ ಕನ್ನಡದ ಕಂಪು ಹಬ್ಬಿಸಬೇಕು ಎಂದು ಹೇಳಿದರು.
ಕುವೆಂಪು, ದ.ರಾ.ಬೇಂದ್ರ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ, ಯ.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರAಥ ಸಾಹಿತಿಗಳು ಅದ್ಬುತ ಕೃತಿಗಳನ್ನು ರಚಿಸಿ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡು ನಾಡಿನ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸಿದ್ದಾರೆ ಎಂದರು.
ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಯುವಜನಾಂಗ ಕನ್ನಡಿಗರ ಸಂಪ್ರದಾಯಗಳನ್ನು ಕಡೆಗಣಿಸಬಾರದು. ಎಲ್ಲೇ ಇರಲೀ, ಹೇಗೆ ಇರಲೀ ಎಂದೆದಿಗೂ ಕನ್ನಡತಾಯಿಯ ಮಗನಾಗಿ ಜೀವಿಸಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಮಾಜಿ ಸದಸ್ಯ ಟಿ.ಮಂಜುನಾಥ್ ಮಾತನಾಡಿ, ದೈನಂದಿನ ಚಟುವಟಿಕೆಯಲ್ಲಿ ಕನ್ನಡದಲ್ಲೇ ವ್ಯವಹರಿಸುವ ಆಟೋ ಚಾಲಕರು ಕನ್ನಡಾಂಬೆಯ ಮಕ್ಕಳಂತೆ. ಪ್ರತಿನಿತ್ಯವು ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಹಾಗೂ ಪ್ರವಾಸಿಗರೊಂದಿಗೆ ಮಾತೃಭಾಷೆಯನ್ನು ಎತ್ತಿಹಿಡಿಯುತ್ತಿರುವ ಆಟೋ ಚಾಲಕರು ನಿಜವಾದ ಕನ್ನಡಿಗರು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ನೆಟ್ಟಕೆರೆಹಳ್ಳಿ ಜಯಣ್ಣ, ಕರವೇ ಮುಖಂಡರಾದ ಮನೋಜ್, ಕುಮಾರ್, ಜೈ ಭಾರತ ಮಾತೆ ಆಟೋ ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ರಾಜೇಶ ಗೌಡ, ಖಜಾಂಚಿ ಯಶ್ವಂತ್, ಮುಖಂಡರಾದ ಇಸ್ಮಾಯಿಲ್, ವಿವೇಕ್‌ಗೌಡ, ಪವನ್ ಮತ್ತಿತರರಿದ್ದರು.