

ಕಲಬುರಗಿ: ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಕಲಿಸುವುದು ಮತ್ತು ಕಲಿಯುವುದು ಅಷ್ಟು ಸುಲಭವಲ್ಲ. ಕಲಿಸುವುದು ಕಷ್ಟಕರ ಜತೆಗೆ ಸವಾಲಿನ ಕೆಲಸ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ವಿ.ಜಿ. ಮಹಿಳಾ ಕಾಲೇಜಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ವೈದ್ಯ ವಿಶ್ವಕೋಶ' ಮೂರನೇ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವೈದ್ಯಕೀಯ ಕೋರ್ಸ್ ಕನ್ನಡದಲ್ಲಿ ಬೋಧನೆ ಮತ್ತು ಕಲಿಕೆ ಕಷ್ಟಸಾಧ್ಯ. ಅದಕ್ಕೆ ಹಲವು ಕಾರಣಗಳಿವೆ. ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಿಂದ ಬರುತ್ತಾರೆ. ಅಲ್ಲದೆ ವಿಶ್ವವ್ಯಾಪಿಯಾಗಿರುವ ಈ ಶಿಕ್ಷಣವನ್ನು ಸಾರ್ವತ್ರಿಕ ಭಾಷೆಯಲ್ಲಿ ಕಲಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈಚೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ವೈದ್ಯಕೀಯ ಸೀಟ್ ಪಡೆಯುತ್ತಿದ್ದಾರೆ. ಅದರಲ್ಲೂ ಸಂವಿಧಾನ ೩೭೧(ಜೆ) ಜಾರಿ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಸೀಟು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೈದ್ಯ ವಿಶ್ವಕೋಶ ಉಪಯುಕ್ತವಾಗಲಿದೆ. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನು ಹಂಪಿ ಕನ್ನಡ ವಿವಿ ಮತ್ತು ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ ಮಾಡಿದೆ ಎಂದು ಶ್ಲಾಘಿಸಿದರು.
ಹಂಪಿ ವಿವಿ ಕುಲಪತಿ ಡಾ.ಡಿ.ವಿ. ಪರಶಿವಮೂರ್ತಿ, ಪ್ರಸಾರಾಂಗ ನಿರ್ದೇಶಕ ಡಾ.ಮಾಧವ ಪೆರಾಜೆ, ವಿಶ್ವಕೋಶ ರೂವಾರಿ ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ, ಡಾ.ಎಚ್. ವೀರಭದ್ರಪ್ಪ, ಡಾ.ಪಿ.ಎಂ. ಬಿರಾದಾರ, ಶರಣು ಪಪ್ಪಾ, ಟಿ.ವಿ. ಶಿವಾನಂದನ್, ಉದಯಕುಮಾರ ಚಿಂಚೋಳಿ, ರಾಜೇಂದ್ರ ಕೊಂಡಾ, ಆನಂದ ಸಿದ್ದಾಮಣಿ ಇತರರಿದ್ದರು. ಪ್ರತಿಷ್ಠಾನ ಕಾರ್ಯದರ್ಶಿ ನರೇಂದ್ರ ಬಡಶೇಷಿ ಸ್ವಾಗತಿಸಿ ನಿರೂಪಣೆ ಮಾಡಿದರು.
ವಿಶ್ವಕೋಶ ಖರೀದಿಸಲು ಸುತ್ತೋಲೆ: ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ ಜತೆಗೂಡಿ ಹಂಪಿ ವಿವಿ ಹೊರತಂದಿರುವ ವೈದ್ಯ ವಿಶ್ವಕೋಶವನ್ನು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಕಡ್ಡಾಯವಾಗಿ ಖರೀದಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ಡಾ.ಶರಣಪ್ರಕಾಶ ಹೇಳಿದರು. ಇದರಿಂದಾಗಿ ಮೆಡಿಕಲï, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನುವು ಆಗಲಿದೆ. ರಾಜೀವಗಾಂಧಿ ಆರೋಗ್ಯ ವಿವಿಯಲ್ಲೂ ಇರಿಸಲಾಗುವುದು. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲ ಸಂಸ್ಥೆಯವರು ಕನಿಷ್ಠ ಐದಾರು ಪ್ರತಿ ವಿಶ್ವಕೋಶ ಖರೀದಿಸಲು ಸೂಚಿಸಲಾಗುವುದು ಎಂದರು. ಡಾ.ಪಿ.ಎಸ್. ಶಂಕರ ಸದಾ ಸಮಾಜಕ್ಕೆ ಉಪಯೋಗ ಆಗುವಂಥ ಕೆಲಸ ಮಾಡಿಕೊಂಡು ಬಂದವರು. ಈಗ ವೈದ್ಯ ವಿಶ್ವಕೋಶ ಸಹ ಸೇರಿದೆ. ಸಮರ್ಪಣಾ ಭಾವದಿಂದ ಕೆಲಸ ಮಾಡುವುದರಿಂದ ಕಲಬುರಗಿ ವೈದ್ಯರು ನಾಡಿನಲ್ಲಿ ಹೆಸರು ಗಳಿಸಿದ್ದಾರೆ ಎಂದು ಹೇಳಿದರು.
ಕನ್ನಡದಲ್ಲಿ ರೋಗಿಗೆ ತಿಳಿಸುವುದು ಕಲಿತರೆ ಸಾಕು: ವೈದ್ಯಕೀಯ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳು ಕಾಯಿಲೆಗಳ ಬಗ್ಗೆ ಕನ್ನಡದಲ್ಲಿ ರೋಗಿಗಳಿಗೆ ತಿಳಿಸುವುದನ್ನು ಈ ಕೋಶ ಓದಿ ಕಲಿತರೆ ಸಾಕು ಎಂದು ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ ಹೇಳಿದರು. ವೈದ್ಯ ವಿಶ್ವಕೋಶ ರೂಪಿಸುವ ಕಾರ್ಯ ೧೯೯೧ರಲ್ಲಿ ಆರಂಭಿಸಿದಾಗ ಪ್ರಥಮ ಆವೃತ್ತಿಯನ್ನು ಜ್ಞಾನಪೀಠ ಡಾ.ಯು.ಆರ್. ಅನಂತಮೂರ್ತಿ ಬಿಡುಗಡೆ ಮಾಡಿದ್ದರು. ೨ನೇ ಆವೃತ್ತಿ ಎರಡು ತಿಂಗಳಲ್ಲಿ ರೂಪಿಸಿ ಕೊಟ್ಟಿದ್ದೆವು. ಈಗ ೩ನೇ ಆವೃತ್ತಿ ಹೊರತರಲು ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹೇಳಿದ್ದರಿಂದ ಆರು ತಿಂಗಳಲ್ಲಿ ಮಾಡಿಕೊಡಲಾಗಿದೆ. ಪರಿಷ್ಕೃತ ವೈದ್ಯ ವಿಶ್ವಕೋಶದಲ್ಲಿ ಹೊಸ ಕಾಯಿಲೆಗಳ ಪದಗಳನ್ನು ಸೇರಿಸಲಾಗಿದೆ. ಕಳೆದ ಸಲಕ್ಕಿಂತಲೂ ೪೦೦ ಪುಟ ಏರಿಕೆಯಾಗಿದ್ದು, ೮೭೫ ಪುಟವಿದೆ ಎಂದು ತಿಳಿಸಿದರು.
ಕನ್ನಡದ ಕಾರ್ಯಗಳ ಜತೆಗೆ ಜ್ಞಾನ ಪ್ರಸಾರ ಮಾಡುವ ಕನ್ನಡ ಪದಗಳನ್ನು ಸೃಷ್ಟಿಸುವ ಕೆಲಸ ಹಂಪಿ ವಿವಿ ಮಾಡುತ್ತಿದೆ. ಕನ್ನಡ ಸಾಹಿತ್ಯ ಹೊರತುಪಡಿಸಿ ವೈದ್ಯಕೀಯ ಶಿಕ್ಷಣ, ತಾಂತ್ರಿಕ, ತಾಂತ್ರಿಕೇತರ, ಭೌಗೋಳಿಕ ಇತರ ವಿಷಯಗಳ ಬಗ್ಗೆ ಕನ್ನಡದಲ್ಲಿ ಪದಗಳನ್ನು ಕೊಡುವ ಗುರಿ ಹೊಂದಲಾಗಿದೆ. ವೈದ್ಯ ವಿಶ್ವಕೋಶ ವೈದ್ಯಕೀಯ ಲೋಕಕ್ಕೆ ಸಮಗ್ರ ಮಾಹಿತಿ ನೀಡಲು ಪೂರಕವಾಗಿದೆ.
| ಡಾ.ಡಿ.ವಿ.ಪರಮಶಿವಮೂರ್ತಿ ಕುಲಪತಿ ಕನ್ನಡ ವಿಶ್ವವಿದ್ಯಾಲಯ ಹಂಪಿ