

ಭಾಲ್ಕಿ: ಕನ್ನಡ ಭಾಷೆ, ಅತ್ಯಂತ ಪ್ರಾಚೀನವಾಗಿರುವ ಭಾಷೆಯಾಗಿದೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಕನ್ನಡ ಭಾಷೆಗೆ ದೇವಭಾಷೆಯ ಪ್ರಾಶಸ್ತ್ಯೆಯನ್ನು ನೀಡಿದರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ೮೪೨ನೇ ಶಿವಾನುಭವ ಗೋಷ್ಠಿ ಮತ್ತು ಶರಣೆ ನೀಲಾಂಬಿಕಾ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕನ್ನಡಗಳಲ್ಲಿಯೇ ವಚನಗಳು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ್ದರು. ಇಂದು ನಾವು ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದೆ. ಕನ್ನಡ ನಮ್ಮ ಮಾತೃಭಾಷೆಯಾಗಿದೆ. ಮಾತೃಭಾಷೆಯಲ್ಲಿಯೇ ನಮಗೆ ಕನಸುಗಳನ್ನು ಬೀಳುತ್ತವೆ. ಅದನ್ನು ನೆನೆಪು ಮಾಡಲು ಮಾತೃ ಭಾಷೆಯ ಶಿಕ್ಷಣ ಅವಶ್ಯಕವಾದದ್ದು. ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದು ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳು ಇವೆ ಎಂದು ಹೇಳಿದರು.
ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿದ ಚನ್ನಬಸವೇಶ್ವರ ಗುರುಕುಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ರಾಷ್ಟç ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆ ದಿಸೆಯಲ್ಲಿ ನಾವು ಮನೆಯಲ್ಲಿ ಮನಸ್ಸಿನಲ್ಲಿ ಕನ್ನಡದ ಪ್ರೀತಿ ಬೆಳೆಸಬೇಕು ಅಂದರೆ ನಮ್ಮ ಸಾಹಿತ್ಯ ಸಂಸ್ಕೃತಿ ಪರಂಪರೆ ಉಳಿಯುತ್ತದೆ. ಬೆಳೆಯುತ್ತದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೀರಾಚಂದ ವಾಘಮಾರೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿದ್ದರು.ಮಲ್ಲಮ್ಮ ಆರ್.ಪಾಟೀಲ್ ಅನುಭಾವ ನೀಡಿದರು.
ಕನ್ನಡಪರ ಸಂಘಟನೆಗಳ ಮುಖಂಡರಾದ ಜೈರಾಜ ಕೊಳ್ಳಾ, ಸಂತೋಷ ಬಿ.ಜಿ.ಪಾಟೀಲ್, ಸಂಗಮೇಶ ಗುಮ್ಮೆ, ಸಂಜುಕುಮಾರ ನಾವದಗಿ, ಸಂತೋಷ ನಾಟೇಕರ, ರಾಜಕುಮಾರ ಡಾವರಗಾಂವೆ, ಬಸವರಾಜ ಸಂಪಂಗೆ, ಅನಿಲ ಹಾಲಪುರ್ಗೆ, ಮಾಳಸ್ಕಾಂತ ವಾಘೆ, ಅಕ್ಷಯ ಸೋಮನಾಥ ಮುದ್ದಾ, ಚಂದ್ರಕಲಾ ಪ್ರಭು ಡಿಗ್ಗೆ, ಕೈಲಾಸ ಪಾಟೀಲ್ ಇದ್ದರು. ಗುರುಪ್ರಸಾದ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೀರಾಚಂದ ವಾಘಮಾರೆ, ನರಸಿಂಹಲು, ಶ್ರೀ ಕಾಂತ ಬಿರಾದಾರ್ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.