ಕನ್ನಡದ ಹಿರಿಮೆ ಎತ್ತಿ ಹಿಡಿಯುವ ಹೊಣೆಗಾರಿಕೆ ನಮ್ಮೆಲ್ಲರದ್ದು

01arsph1ep
ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪತ್ರಕರ್ತರಾದ ಮೋಹನ್ ಕುಮಾರ್, ಎಚ್.ಡಿ.ಸೀತಾರಾಮ್, ಆನಂದ್ ಕೌಶಿಕ್ ಆರೋಗ್ಯ ಇಲಾಖೆಯ ಬಿ.ಪರಮೇಶ್ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಸೀಲ್ದಾರ್ ವಿಭಾ ವಿ ರಾಥೋಡ್, ಜಿವಿಟಿ ಬಸವರಾಜ್, ಸಿ.ಗಿರೀಶ್, ಇಒ ನಾಗರಾಜ್ ಇದ್ದರು.
Published on

ಅರಸೀಕೆರೆ: ನಾಡು, ನುಡಿ, ನೆಲ, ಜಲದ ಹಿರಿಮೆಯನ್ನು ಎತ್ತಿ ಹಿಡಿಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಹಸೀಲ್ದಾರ್ ವಿಭಾ ವಿ.ರಾಥೋಡ್ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಜೇನುಕಲ್ ಕ್ರಿಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷಾವಾರು ಪ್ರಾಂತ್ಯಗಳ ಘೋಷಣೆ ಬಳಿಕ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂಬ ನಿಲುವು ಪ್ರಶಂಸನೀಯ. ಇದಕ್ಕೆ ಪೂರಕ ಎನ್ನುವಂತೆ ವಿಶ್ವಭಾರತಿಗೆ ಕನ್ನಡದಾರತಿ ಹಾಗೂ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ತಾಲೂಕಿನ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿ ವರ್ಗದ ಸ್ಪಂದನೆ ಅವಿಸ್ಮರಣೀಯವಾದದು ಎಂದರು.

ಶತಮಾನಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬೆಳವಣಿಗೆಗೆ ಹಲವು ಮಹನೀಯರು ತಮ್ಮದೇ ಕೊಡುಗೆ ನೀಡಿದ್ದು, ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಜತೆಗೆ ಕರ್ನಾಟಕದ ಏಕೀಕರಣಕ್ಕೆ ಹೋರಾಟ ನಡೆಸಿದ ಮಹನೀಯರ ಆದರ್ಶ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು ಕನ್ನಡ ನಾಡಿನ ಹಿರಿಮೆ, ಗರಿಮೆಗಳನ್ನು ಜಗತ್ತಿಗೆ ಪಸರಿಸೋಣ ಎಂದು ಕರೆ ನೀಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನಮ್ಮಲ್ಲಿರುವ ನೈಸರ್ಗಿಕ ಹಾಗೂ ಮಾನವ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಸರ್ಕಾರಗಳು ಮುಂದಾಗಬೇಕು ಎಂದರು.
ಕೃಷಿ, ಪತ್ರಿಕೋದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್, ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಉಪಾಧ್ಯಕ್ಷ ಕಾಂತೇಶ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ಡಿವೈಎಸ್‌ಪಿ ಅಶೋಕ್ ತಾಪಂ ಇಒ ನಾಗರಾಜ್, ಬಿಇಒ ಮೋಹನ್‌ಕುಮಾರ್, ಬಿಸಿಎ ಅಧಿಕಾರಿ ನಾರಾಯಣಪ್ಪ ಇದ್ದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಒತ್ತಾಯ: ಶಿಷ್ಟಾಚಾರದ ಹೆಸರಿನಲ್ಲಿ ಸ್ಥಾನಮಾನ ಹೊಂದಿರುವ ಅನ್ಯ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಮಾತನಾಡುವುದಕ್ಕೆ ಆಯೋಜಕರು ಅವಕಾಶ ನೀಡದಿರುವುದು ಅಕ್ಷಮ್ಯ. ಸಮಾರಂಭದ ಹೊಣೆ ಹೊತ್ತವರಿಗೆ ತಕ್ಷಣವೇ ನೋಟಿಸ್ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ವೇದಿಕೆಯಲ್ಲಿ ತಹಸಿಲ್ದಾರ್ ವಿಭಾ ವಿ.ರಾಥೋಡ್ ಅವರಿಗೆ ಒತ್ತಾಯಿಸಿದ ಪ್ರಸಂಗವೂ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net