ಕನ್ನಡದ ಸಮಸ್ಯೆಗಳಿಗೆ ಎಲ್ಲರೂ ಒಗ್ಗೂಡಲಿ

26sor2
ಸೊರಬ ತಾಲೂಕು ಜಡೆ ಸಂಸ್ಥಾನದ ಸಭಾಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯಿಂದ ಜಡೆ ಹೋಬಳಿ ಘಟಕದ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ನಾಗರಾಜ್, ಹೊನ್ನಪ್ಪ, ಕೆ.ಪಿ.ಶ್ರೀಧರ್ ನೆಮ್ಮದಿ, ಎಸ್.ರಾಘವೇಂದ್ರ ಇತರರಿದ್ದರು.
Published on

ಸೊರಬ: ಸುದೀರ್ಘ ಇತಿಹಾಸ ಇರುವ ಕನ್ನಡ ಭಾಷೆ, ನೆಲ, ಜಲದ ವಿಷಯದಲ್ಲಿ ಯಾವುದೇ ತೊಡಕುಗಳು ಎದುರಾದರೂ ಕನ್ನಡಿಗರು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಜಡೆ ಸಂಸ್ಥಾನ ಸಭಾಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಸೇನೆಯಿಂದ ಆಯೋಜಿಸಿದ್ದ ಜಡೆ ಹೋಬಳಿ ಘಟಕದ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಆದಿ ಕವಿ ಪಂಪನಿಂದ ಹಿಡಿದು ರನ್ನ, ಆಧುನಿಕ ಕಾಲದಲ್ಲಿ ಕುವೆಂಪು, ದ.ರಾ.ಬೇಂದ್ರೆ ಹೀಗೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕೆ ಪುರಾತನ ಇತಿಹಾಸ ಇರುವುದರ ಜತೆಗೆ ಶಾಸ್ತ್ರೀಯ ಸ್ಥಾನಮಾನವೂ ಲಭಿಸಿದೆ. ಪ್ರಸ್ತುತ ಕನ್ನಡ, ಕನ್ನಡತನ, ನೆಲ, ಜಲ ರಕ್ಷಣೆ ಮತ್ತು ಏಳಿಗೆಗಾಗಿ ಕನ್ನಡಿಗರು ಹೋರಾಡಬೇಕು ಎಂದು ಹೇಳಿದರು. ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿ ಇಟ್ಟುಕೊಂಡವರು ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಭಾಷೆಗಳು ನಮ್ಮ ಮೇಲೆ ಎಷ್ಟೇ ಪ್ರಭಾವ ಬೀರಿದರೂ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕರವೇ ಕನ್ನಡ ಸೇನೆಯ ಕಾರ್ಯಕರ್ತರು ಕನ್ನಡ ಕಟ್ಟುವಲ್ಲಿ ಕ್ರಿಯಾಶೀಲರಾಗಿರಬೇಕು ಎಂದರು. ಕರವೇ ಕನ್ನಡಸೇನೆ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ಬಡವರ, ದೀನದಲಿತರ ಪರವಾಗಿ ಹೋರಾಟ ನಡೆಸಲು ಸಂಘಟನೆ ಮುಂದಾಗಿದೆ. ಕನ್ನಡ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಸಂಸ್ಕೃತಿಯ ಪ್ರತೀಕವಾಗಿರುವ ಭಾಷೆಯನ್ನು ಉಳಿಸಿ, ಬೆಳೆಸುವ ಕಾಯಕವನ್ನು ಎಲ್ಲರೂ ಸ್ವೀಕರಿಸಬೇಕು. ತಾಲೂಕಿನಲ್ಲಿ ಸಂಘಟನೆಯಿಂದ ಅನೇಕ ಜನಪರ ಹೋರಾಟ ನಡೆಸಲಾಗಿದೆ. ಇದೀಗ ಜಡೆ ಹೋಬಳಿ ಘಟಕವನ್ನು ಸಂಘಟಿಸಲಾಗುತ್ತಿದೆ ಎಂದರು. ಕರವೇ ಕನ್ನಡ ಸೇನೆ ಗೌರವಾಧ್ಯಕ್ಷ ನಾಗರಾಜ್, ಗ್ರಾಮಾಂತರ ಅಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಶ್ರೀಧರ್ ನೆಮ್ಮದಿ, ಪ್ರಧಾನ ಸಂಚಾಲಕ ಎಸ್.ರಾಘವೇಂದ್ರ, ತಾಲೂಕು ಸಂಘಟನಾ ಕಾರ್ಯದರ್ಶಿ ಶಿವಯೋಗಿಸ್ವಾಮಿ ಸುತ್ತೂರು ಮಠ, ಸಂಚಾಲಕ ಎಂ.ಎಸ್.ಚೇತನ್, ಮಂಜುನಾಥ್, ಮಂಜುನಾಥ ರಾವ್, ಮಂಜುನಾಥ ದೈವಜ್ಞ ಇತರರಿದ್ದರು.

ಪದಾಕಾರಿಗಳು ನೂತನ ಪದಾಕಾರಿಗಳಾಗಿ ರಾಜಪ್ಪ (ಅಧ್ಯಕ್ಷ), ಕುಮಾರ ಜಡೆ, ಎಸ್. ಪ್ರಮೋದ ಕುಮಾರ್(ಉಪಾಧ್ಯಕ್ಷರು), ಕೆ.ನಿಂಗರಾಜ (ಪ್ರಧಾನ ಕಾರ್ಯದರ್ಶಿ), ವಾಸುದೇವ (ಸಂಘಟನಾ ಕಾರ್ಯದರ್ಶಿ), ಗಣಪತಿ, ಮಾಲತೇಶ, ಜಗದೀಶ ಜಡೆ, ಹನುಮಂತಪ್ಪ, ಆರ್.ರಾಜೇಂದ್ರ (ಸಂಚಾಲಕರು) ಅವರನ್ನು ನೇಮಕ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net