

ಚಾಮರಾಜನಗರ: ಇಮ್ಮಡಿ ಪುಲಿಕೇಶಿ ಬಾದಾಮಿ ಚಾಲುಕ್ಯ ವಂಶದ ಅತ್ಯುತ್ತಮ ಅರಸರಾಗಿದ್ದು, ಅವರು ಕನ್ನಡದ ಶ್ರೇಷ್ಠ ದೊರೆಯಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶೈಲಕುಮಾರ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 7ನೇ ದಿನದ ಕಾರ್ಯಕ್ರಮದಲ್ಲಿ ಇಮ್ಮಡಿ ಪುಲಿಕೇಶಿ ಅವರ ಕುರಿತು ಮಾತನಾಡಿದರು.
ಇಮ್ಮಡಿ ಪುಲಿಕೇಶಿಯ ಅವರ ಕಾಲದಲ್ಲಿ ಚಾಲುಕ್ಯ ಸಾಮ್ರಾಜ್ಯವು ಇಂದಿನ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಆಂಧ್ರಪ್ರದೇಶ,ಗುಜರಾತ್, ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳನ್ನು ವ್ಯಾಪಿಸಿತ್ತು. ಚಾಲುಕ್ಯ ಚಕ್ರವರ್ತಿ ಕೃತವರ್ಮನ ಮಗನಾದ ಪುಲಕೇಶಿ ರಾಜ್ಯದ ಮೇಲೆ ಹಿಡಿತ ಸಾಧಿಸಲು ತನ್ನ ಚಿಕ್ಕಪ್ಪನಾದ ಮಂಗಳೇಶನ ವಿರುದ್ಧ ದಂಗೆಯೆದ್ದು ಅವನನ್ನು ಪಟ್ಟದಿಂದ ಕೆಳಗಿಳಿಸಿ ತಾನು ಪಟ್ಟಕ್ಕೇರುತ್ತಾನೆ. ಅಪ್ಪಾಯಿಕ ಮತ್ತು ಗೋವಿಂದರ ಬಂಡಾಯವನ್ನು ಮುರಿದ ಪುಲಕೇಶೀ ಕದಂಬರನ್ನು ಸೋಲಿಸಿ ಅಳುಪರು ಮತ್ತು ಗಂಗರನ್ನು ತನ್ನ ಸಾಮಂತರನ್ನಾಗಿಸಿಕೊಳ್ಳುತ್ತಾನೆ. ಪಶ್ಚಿಮ ಕರಾವಳಿಯಲ್ಲಿ ಕೊಂಕಣದ ಮೌರ್ಯರನ್ನು ಸೋಲಿಸಿ ಆ ಪ್ರದೇಶಗಳನ್ನು ತನ್ನ ಆಡಳಿತಕ್ಕೆ ತರುತ್ತಾನೆ. ಅವನ ಐಹೊಳೆಯ ಶಾಸನ ಲಾಟರು, ಮಾಳ್ವರು ಮತ್ತು ಗುರ್ಜರರ ಮೇಲೆ ಇವನು ಸಾಧಿಸಿದ ವಿಜಯವನ್ನು ಸಾರುತ್ತವೆ ಎಂದರು.
ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಯಕ ಸಿದ್ದಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ತಮಿಳು ಸಂಘದ ಅಧ್ಯಕ್ಷ ಜಗದೀಶ್, ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ನಗರಸಭಾ ಮಾಜಿ ಅಧ್ಯಕ್ಷ ಮಹದೇವನಾಯಕ, ಗಡಿಯಜಮಾನ್ ಮಹದೇವಶೆಟ್ಟಿ, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಪದ್ಮಪುರುಷೋತ್ತಮ್, ಆಟೋ ಲಿಂಗರಾಜು, ನಂಜುಂಡಶೆಟ್ಟಿ, ಹಾಜರಿದ್ದರು.