

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡದ ಲಿಪಿ, ಭಾಷೆ, ಕನ್ನಡಕ್ಕಿರುವ ಪರಂಪರೆ, ಸೂಕ್ಷ್ಮವಾಗಿ ಅವಲೋಕಿಸಿದಾಗ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ ಎಂದು ಸಾಹಿತಿ ಎ.ಎ. ದರ್ಗಾ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ಸಂಭ್ರಮ-50 ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕನ್ನಡದ ಉದಯ ಹೇಗೆ?ಅಕ್ಷರವನ್ನು ಬರೆದವರು ಯಾರು ಎಂದು ಪ್ರಶ್ನೆ ಉದ್ಭವಿಸಿದಾಗ ನಮಗೆ 3ನೇ ಶತಮಾನದಿಂದಲೂ ಮೌರ್ಯರ ಕಾಲದಲ್ಲಿ ಬ್ರಾಹ್ಮಿ ಲಿಪಿ, ಪ್ರಾಕೃತ ಲಿಪಿಯೊಂದಿಗೆ ಪುನ್ನಾಟ ಒಂದು ಮನೆತನವಿತ್ತು. ಇವರೇ ಕನ್ನಡದ ಮೂಲಿಗರು ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡದ ಪ್ರಪ್ರಥಮ ರಾಜ ಮನೆತನ ಎಂದರೆ ಕದಂಬರು. ಇವರು 4ನೇ ಶತಮಾನದಲ್ಲಿ ಕಾಣಸಿಗುತ್ತಾರೆ. ಪುನ್ನಾಟರೊಂದಿಗೆ ವೈವಾಹಿಕ ಸಂಬಂಧ ಬೆಳೆಸುತ್ತಾರೆ. ಪ್ರಾಕೃತಿಕ ಭಾಷೆಯೊಂದಿಗೆ ಸಂಸ್ಕೃತ, ಬ್ರಾಹ್ಮಿ ಲಿಪಿಯೊಂದಿಗೆ ಬೆರೆಸುತ್ತಾರೆ. ಆಗ ಸಂಸ್ಕೃತ ಭಾಷೆ ಮುನ್ನಲೆಗೆ ಬಂತು. ಅಲ್ಲಿಂದಲೇ ಲಿಪಿ ವಿಕಾಸವಾಗಿ ಕನ್ನಡ ಭಾಷೆ ಲಿಪಿ ವಿಭಿನ್ನ ರೀತಿಯ ತಲೆಪಟ್ಟಿ ಸ್ವರೂಪ ಪಡೆಯಿತು. ತಾಡೋಲೆ, ಶಿಲೆ, ಮರದ ತೊಟ್ಟಿಗೆಗಳ ಮೇಲೆ ಅಂದಿನ ಜನ ಬರೆಯುತ್ತಿದ್ದರು. ಆ ಕಾಲ ಘಟ್ಟದ ಶಾಸನಗಳಾದ ಚಂದವಳ್ಳಿ ಶಾಸನ, ಮಳವಳ್ಳಿ ಶಾಸನದೊಂದಿಗೆ ಕನ್ನಡದ ಪ್ರಪ್ರಥಮ ಶಾಸನ ಬೇಲೂರಿನ ಹಲ್ಮಿಡಿ ಶಾಸನ ಸಿಕ್ಕಿತೆಂದು ಅನೇಕ ಐತಿಹ್ಯಗಳಿಂದ ತಿಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಕರ್ಮಿ ಸಿ. ಬಸಲಿಂಗಯ್ಯ ಮಾತನಾಡಿ, ನಮ್ಮ ಕನ್ನಡದ ಮೇಲೆ ನಿರಂತರ ಅಭಿಮಾನವಿರಬೇಕು. ಭಾಷಾ ಬಳಕೆಯಲ್ಲಿ ಕನ್ನಡದ ಪದಗಳನ್ನು ಹೆಚ್ಚಿಗೆ ಬಳಸಿದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ವಿಜಯಲಕ್ಷ್ಮೀ ಮಲ್ಲಾಡಿ, ಸವಿತಾ ಪಾಟೀಲ, ರಾಜುಗೌಡ ಪಾಟೀಲ, ಆಸ್ಮಾ, ಅರುಣ ಗಂಜಿಗಟ್ಟಿ, ಮಂಜುನಾಥ ಮಣ್ಣೂರ, ಅಯ್ಯಪ್ಪಯ್ಯ ಹಲಗಲಿಮಠ, ಇತರರು ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಗುರು ಹಿರೇಮಠ ವಂದಿಸಿದರು.