

ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕಕ್ಕೆ ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟ ಬಾನು ಮುಷ್ತಾಕ್ ಕನ್ನಡದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಲೋಕಕ್ಕೆ ಬೂಕರ್ ಪ್ರಶಸ್ತಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಥಾಗಾರ್ತಿ ಬಾನು ಮುಷ್ತಾಕ್ ಕನ್ನಡ ಭಾಷೆ, ಸಾಹಿತ್ಯದ ರಚನೆ ಹಾಗೂ ಸಾಮರಸ್ಯದ ಚಿಂತನೆಯ ಮೂಲಕ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು ಕನ್ನಡಿಗರಿಗೆ ಸ್ಪೂರ್ತಿಯ ಸಂಕೇತವಾಗಿದೆ. ಕನ್ನಡಿಗರ ಸಾಹಿತ್ಯವು ಮತ್ತಷ್ಟು ವಿಶ್ವವಿಖ್ಯಾತಿಯನ್ನು ಪಡೆಯಲಿ. ಯುವಕರು ಮತ್ತು ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಪುಸ್ತಕಗಳ ರಚನೆಗೆ ಮುಂದಾಗ ಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಹಿರಿಯ ಕಲಾವಿದ ಹರದನಹಳ್ಳಿ ಘಟಂ ಕೃಷ್ಣ, ಕಸಾಪ ಸದಸ್ಯ ರವಿಚಂದ್ರ ಪ್ರಸಾದ್, ಬಿ.ಕೆ.ಆರಾಧ್ಯ, ಸರಸ್ವತಿ , ಶಿವಲಿಂಗ ಮೂರ್ತಿ, ಸುನಿತಾ, ಕೃಷ್ಣ ಉಪಸ್ಥಿತರಿದ್ದರು.