

ಮೈಸೂರು: ಇತ್ತೀಚಿಗೆ ನಿಧನರಾದ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ವಿಜಯ ವಿಠ್ಠಲ ವಿದ್ಯಾಸಂಸ್ಥೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಕವಿ ಡಾ.ಜಯಪ್ಪ ಹೊನ್ನಾಳಿ ಮಾತನಾಡಿ, ಎಚ್‌ಎಸ್‌ವಿ ಮುಖ್ಯವಾಗಿ ಕವಿಗಳು. ಕವಿ ಅಂತ ಹೇಳುವುದೇ ಜನ ಸಮುದಾಯ ಒಬ್ಬ ಲೇಖಕನನ್ನು ಗೌರವಿಸುವ ರೀತಿ. ಅವರ ಒಣಮರದ ಗಿಳಿಗಳು ಕವನ ಸಂಕಲನದಲ್ಲಿ ಆವಾಹನೆ ಎಂಬ ಕವಿತೆಯಲ್ಲಿ ಪ್ರಾರ್ಥನೆಯಂತೆ ಅವರು ಕೇಳುವ ಪ್ರಸಂಗವಿದೆ ಎಂದು ಹೇಳಿದರು.
ವೆಂಕಟೇಶ ಮೂರ್ತಿ ಅವರು ಕನ್ನಡದ ಕಾವ್ಯ ಸಾಹಿತ್ಯವನ್ನು, ಜೀವಂತಿಕೆಯನ್ನು ಪೋಷಿಸಿದ ಮುಖ್ಯ ಕವಿಗಳಲ್ಲಿ ಒಬ್ಬರು. ಪಂಪನಿಂದ ಕುಮಾರವ್ಯಾಸ, ಬೇಂದ್ರೆ, ಕುವೆಂಪು, ಪುತಿನ, ಕೆಎಸ್‌ನ, ಅಡಿಗ ಮೊದಲಾದವರವರೆಗೆ ಬೆಳೆದ ಅಭಿಜಾತ ಕಾವ್ಯ ಪರಂಪರೆಯನ್ನು ರೂಢಿಸಿ ಮುಂದುವರಿಸಿದ ಇಂದಿನ ಕವಿಗಳಲ್ಲಿ ಪ್ರಮುಖರು.
ಫಲ ಬಿಡುವ ವೃಕ್ಷದಂತೆ ಕನ್ನಡ ಕಾವ್ಯದ ಬೀಜ ಪ್ರವೃತ್ತಿಯನ್ನು ಸೃಷ್ಟಿ ರೂಪದಲ್ಲಿ ಮುಂದುವರಿಸಿದವರು ಎಂದು ಅಭಿಪ್ರಾಯಪಟ್ಟರು.
ಕವಯಿತ್ರಿ ಡಾ.ಲಾವಣ್ಯ ಪ್ರಭಾ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ್, ಪ್ರಾಂಶುಪಾಲ ಸತ್ಯಪ್ರಸಾದ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಲತಾ ಮೋಹನ್, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೇಶ್ ಇದ್ದರು